ಕರ್ನಾಟಕ

ಪುತ್ರಿಯ ಮದುವೆಗೆ ಮೀಸಲಿಟ್ಟ 50 ಲಕ್ಷವನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ ವೈದ್ಯೆ!

Pinterest LinkedIn Tumblr


ಬೆಂಗಳೂರು (ಆ.12): ಭಾರೀ ಮಳೆಯಿಂದಾಗಿ ಇಡೀ ರಾಜ್ಯ ತತ್ತರಿಸಿದೆ. ನೆರೆ ಸಂತ್ರಸ್ತರಿಗೆ ಬಹುತೇಕರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಕೆಲವರು ಪ್ರವಾಸವನ್ನು ರದ್ದು ಮಾಡಿ, ಆ ಹಣವನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ್ದಾರೆ. ಇನ್ನೂ ಕೆಲವರು, ಮನೆಗೆಂದು ತಂದಿಟ್ಟಿದ್ದ ದಿನಸಿ ಧಾನ್ಯಗಳನ್ನು ಪ್ರವಾಹ ಪೀಡಿತರಿಗೆ ನೀಡಿದ್ದಿದೆ. ಈ ಮಧ್ಯೆ, ವೈದ್ಯೆಯೊಬ್ಬರು ಮಗಳ ಮದುವೆಗೆಂದು ತೆಗೆದಿಟ್ಟ 50 ಲಕ್ಷ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಮನಾ ರಾವ್​ 50 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಿದವರು. ಕರ್ನಾಟಕದ ಮೂಲದವರಾದ ಇವರು ಮುಂಬೈನಲ್ಲಿ ವಾಸವಾಗಿದ್ದಾರೆ. “ಸಾಮಾಜಿಕ ಡಾಕ್ಟರ್, ಸಮಾಜ ಸೇವೆ ನನ್ನ ಉಸಿರು. ನಾನು ಕನ್ನಡತಿ. ನಾನು ಕನ್ನಡಿಗಳೆಂಬ ಋಣವೂ ಮಾತ್ರವೇ ನನ್ನದು‌,” ಎಂದು ಅವರು ತಮ್ಮ ಫೇಸ್​ಬುಕ್​ ಖಾತೆಯ ಮಾಹಿತಿಯಲ್ಲಿ ಬರೆದುಕೊಂಡಿದ್ದಾರೆ. 50 ಲಕ್ಷ ರೂ ಹಣವನ್ನು ಪರಿಹಾರವಾಗಿ ನೀಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದ ಅವರು, “ಮಗಳ ಮದುವೆಗೆಂದು ಸುಮಾರು 50 ಲಕ್ಷ ರೂಪಾಯಿ ತೆಗೆದಿಟ್ಟಿದ್ದೆ. ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಇಷ್ಟು ಪರಿಹಾರ ನೀಡಲು ಮಾತ್ರ ನನ್ನ ಕೈಯಲ್ಲಿ ಸಾಧ್ಯ. ತಾಯಿ ನೆಲದ ಋಣ ತೀರಿಸಲು ಬಂದ ಅವಕಾಶ ಇದು,” ಎಂದಿದ್ದಾರೆ.

ಅಲ್ಲದೇ, ಸಂತ್ರಸ್ತರ ನಡುವೆ ಇದ್ದು ಸಹಾಯ ಮಾಡಲು ಸಾಧ್ಯವಾಗಿಲ್ಲವಲ್ಲ ಎನ್ನುವ ಬೇಸರ ಅವರನ್ನು ಕಾಡುತ್ತಿದೆಯಂತೆ. “ಇಲ್ಲಿ ವಿಪರೀತ ಮಳೆ. ಮಳೆಗೆ ನಲುಗಿದ ಜನರ ನಡುವೆ ನಾನಿರುವೆ. ತಾಯ್ನಾಡಿನ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ,” ಎಂದು ಅವರು ಬರೆದುಕೊಂಡಿದ್ದಾರೆ.

Comments are closed.