ನವದೆಹಲಿ: ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅನರ್ಹಗೊಂಡು ತಮ್ಮನ್ನು ಅನರ್ಹಗೊಳಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಪ್ರಶ್ನಿಸಿದ್ದ ರೆಬಲ್ ಶಾಸಕರ ತಾವು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆ ಪಟ್ಟಿಗೆ ಅರ್ಜಿಯನ್ನು ಸೇರಿಸುವಂತೆ ರಿಜಿಸ್ಟ್ರಾರ್ ಅವರಿಗೆ ಮೆಮೊ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ರಾಜೀನಾಮೆ ಸಲ್ಲಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಮತ್ತು ಆದೇಶವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿ ಆ.1ರಂದು ಅನರ್ಹಗೊಂಡ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರು.
ನ್ಯಾಯಾಧೀಶ ಅರುಣ್ ಮಿಶ್ರಾ ಅವರಿದ್ದ ಏಕ ಸದಸ್ಯ ಪೀಠವು, ಅರ್ಜಿಯನ್ನು ರೆಜಿಸ್ಟ್ರಾರ್ ಅವರು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ರಾಜೀನಾಮೆಯು ಸ್ವಯಂಪ್ರೇರಿತ ಮತ್ತು ಸರಿಯಾಗಿದೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ್ದ ನಿರ್ಧಾರವು ಸಂಪೂರ್ಣವಾಗಿ ಅಕ್ರಮ, ನಿರಂಕುಶ ಮತ್ತು ದುರದ್ದೇಶಪೂರಿತವಾಗಿದೆ. ಸಂವಿಧಾನದ 190ನೇ ವಿಧಿ ಮತ್ತು ಕರ್ನಾಟಕ ವಿಧಾನಸಭೆಯ ವಿಧಿ 202ರ ನೀತಿಯನ್ವಯ ನಾವು ರಾಜೀನಾಮೆಯನ್ನು ಸಲ್ಲಿಸಿದ್ದೇವೆ. ಈ ಪ್ರಕಾರ ಯಾವುದೇ ಶಾಸಕನು ತಾನೇ ಸಹಿ ಮಾಡಿದ ರಾಜೀನಾಮೆ ಸಲ್ಲಿಸಬಹುದು ಮತ್ತು ಸ್ಪೀಕರ್ ರಾಜೀನಾಮೆಯ ಪ್ರಾಮಾಣಿಕತೆ ಮತ್ತು ಸ್ವಯಂಪ್ರೇರಿತತೆ ಬಗ್ಗೆಯಷ್ಟೇ ಪರಿಶೀಲಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಅತೃಪ್ತ ಶಾಸಕರ ಪರವಾಗಿ ನ್ಯಾಯವಾಧಿ ಶುಭಾಂಶು ಪಧಿ ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದ 18 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸತತ ಒಂದು ತಿಂಗಳ ಕಾಲ ಮುಂಬೈನಲ್ಲಿ ವಾಸ್ತವ್ಯ ಹೂಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾಗಲು ಕಾರಣರಾಗಿದ್ದರು. ಹೀಗಾಗಿ ಪಕ್ಷದ ವಿಪ್ ಉಲ್ಲಂಘಿಸಿದ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.
ಬಳಿಕ ಸ್ಪೀಕರ್ ರಮೇಶ್ ಕುಮಾರ್ ಜು. 25 ರಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಅಲ್ಲದೆ, ಜುಲೈ 28 ರಂದು ಮತ್ತೆ 14 ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದರು.
Comments are closed.