ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ಕೈತಪ್ಪುವುದು ಬಹುತೇಕ ಖಚಿತವಾಗಿದ್ದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಈ ಹುದ್ದೆ ವಹಿಸಿಕೊಳ್ಳುವ ಸಾಧ್ಯತೆಯಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತರಂತಿರುವ ಸಿದ್ದು ದೋಸ್ತಿ ಸರಕಾರ ಪತನದ ಬಳಿಕ ತಾವೇ ಪ್ರತಿಪಕ್ಷದ ನಾಯಕರೆಂದು ಭಾವಿಸಿಕೊಂಡಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ನಾಯಕರಿಗೆ ಈ ಜವಾಬ್ದಾರಿ ನೀಡುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಆದರೆ, ಈ ಬಾರಿ ಪಕ್ಷದೊಳಗಿನ ಸಿದ್ದು ವಿರೋಧಿಗಳು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯ ಮುನ್ಸೂಚನೆ ದೊರೆತಿದೆ ಎನ್ನಲಾಗುತ್ತಿದೆ.
ಮೈತ್ರಿ ಸರಕಾರ ಉರುಳುತ್ತಿದ್ದಂತೆ ಪ್ರದೇಶ ಕಾಂಗ್ರೆಸ್‌ನ ಪ್ರಮುಖರಲ್ಲಿ ಕೆಲವರು ವರಿಷ್ಠರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಸಿದ್ದು ಅವರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬಾರದೆಂದು ದೂರು ನೀಡಿದ್ದಾರೆ. ಇದರ ಬೆನ್ನಿಗೇ ಈ ಸ್ಥಾನಕ್ಕೆ ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಹೆಸರು ಮುನ್ನೆಲೆಗೆ ಬಂದಿತ್ತು. ಸಿಎಲ್‌ಪಿ ನಾಯಕರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ಕೊಡುವ ಸಂಪ್ರದಾಯ ಮುರಿಯಬಾರದೆಂದು ಸಿದ್ದು ಬೆಂಬಲಿಗರೂ ಒತ್ತಡ ತಂದಿದ್ದರು. ಆದರೆ, ದೋಸ್ತಿ ಸರಕಾರದಲ್ಲಿ ಪರಮೇಶ್ವರ್ ಡಿಸಿಎಂ ಆಗಿದ್ದರೂ ಅವರಿಗೆ ಸಿಎಲ್‌ಪಿ ನಾಯಕನ ಸ್ಥಾನ ನೀಡಿರಲಿಲ್ಲ. ಈಗಲೂ ಇದೇ ಸೂತ್ರದಡಿ ಸಿಎಲ್‌ಪಿ ಮತ್ತು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಪ್ರತ್ಯೇಕ ನೇಮಕ ಸೂಕ್ತವೆಂದು ಸಿದ್ದು ವಿರೋಧಿಗಳು ಪಟ್ಟು ಹಾಕಿದ್ದರು. ಈ ಹಂತದಲ್ಲಿ ಹೊಸ ದಾಳವುರುಳಿಸಿದ ಸಿದ್ದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೆಸರನ್ನು ಮುಂಚೂಣಿಗೆ ತಂದಿದ್ದರು. ಸಿದ್ದು ಅವರ ಈ ತಂತ್ರಗಾರಿಕೆಯೂ ಫಲ ಕೊಡಲಿಲ್ಲವೆಂದು ಹೇಳಲಾಗುತ್ತಿದೆ.
ಅಂತಿಮವಾಗಿ ಪ್ರತಿಪಕ್ಷದ ನಾಯಕರ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಹೆಸರು ಸೂಚಿಸಲು ಹೈಕಮಾಂಡ್ ನಿರ್ಧರಿಸಿದೆ. ಅಧಿಕೃತ ಘೋಷಣೆ ಶೀಘ್ರದಲ್ಲೆ ಆಗಲಿದೆ. ಸಿದ್ದರಾಮಯ್ಯ ಸಿಎಲ್‌ಪಿ ನಾಯಕರಾಗಿ ಮುಂದುವರಿಯಲಿದ್ದಾರೆ. ವಿಶ್ವಾಸಕ್ಕೆ ತೆಗೆದುಕೊಳ್ಳುವ ದೃಷ್ಟಿಯಿಂದ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯಲ್ಲೂ ಸಿದ್ದರಾಮಯ್ಯಗೆ ಮಹತ್ವದ ಜವಾಬ್ದಾರಿ ವಹಿಸಲು ಹೈಕಮಾಂಡ್ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ.
Comments are closed.