ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಸಿದ್ಧರಾಮಯ್ಯ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಹರಿಹಾಯ್ದ ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿರೋದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇವತ್ತು ಖತಂ ಆಗಿದೆ. ಕಳೆದ ಮೂರು ದಿವಸಗಳಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರು ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ಸೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಕಾರಣ ಎಂದು ದೂರುತ್ತಲೇ ಬಂದಿದ್ದರು. ಇಂದು ಸಿದ್ಧರಾಮಯ್ಯ ಪತ್ರಿಕಾಗೋಷ್ಠಿ ಮಾಡಿ ದೇವೆಗೌಡರು ಮತ್ತು ಕುಟುಂಬದ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡಿದ್ದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ತಲುಪಿದಾಗ ಅಖಾಡಕ್ಕೆ ಬಿಜೆಪಿ ಎಂಟ್ರಿಯಾಗಿದೆ. ಈಗಾಗಲೇ ಜೆಡಿಎಸ್ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಮೈತ್ರಿ ಸಾಧ್ಯತೆಗಳು ದಟ್ಟವಾಗಿದೆ.
ಇಂದು ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ಮೈತ್ರಿಮಾಡಿಕೊಳ್ಳುವ ಬಗ್ಗೆ ಎರಡು ಪಕ್ಷಗಳು ಪರಸ್ಪರ ಮಾತುಕತೆ ನಡೆಸಿವೆ. ಜಿ.ಟಿ.ದೇವೆಗೌಡರು ಈಗಾಗಲೇ ಬಿಜೆಪಿ ಮುಂದೇ ಈ ಪ್ರಸ್ತಾಪವನ್ನು ಇಟ್ಟಿದ್ದಾರೆ. ನಾಯಕರ ಮಟ್ಟದಲ್ಲಿ ಇನ್ನಷ್ಟೇ ಚರ್ಚೆಯಾಗಬೇಕಿದೆ ಎಂದಿದ್ದಾರೆ.
ಇಷ್ಟಕ್ಕೆ ನಿಲ್ಲದ ಮಾಧುಸ್ವಾಮಿ, ಜೆಡಿಎಸ್ ವರಿಷ್ಠ ದೇವೆಗೌಡರನ್ನು ಸಮರ್ಥಿಸಿ ಮಾತನಾಡಿದ್ದಾರೆ. ಸಿಬಿಐ ತನಿಖೆಗೆ ಹೆದರಿ ದೇವೆಗೌಡರು ಅಮಿತ್ ಶಾ ಮತ್ತು ಮೋದಿಯನ್ನು ಸಮರ್ಥಿಸಿಲ್ಲ. ಅಂತಹ ಅಗತ್ಯ ದೇವೆಗೌಡರಿಗೆ ಇಲ್ಲ ಎಂದಿದ್ದಾರೆ.
Comments are closed.