ಕರ್ನಾಟಕ

ಪ್ರವಾಹ ಸಂತ್ರಸ್ತರಿಗೆ ರಿಲಯನ್ಸ್​​ ಫೌಂಡೇಷನ್ ನಿಂದ 5 ಕೋಟಿ ಚೆಕ್​​​ ವಿತರಣೆ​​

Pinterest LinkedIn Tumblr


ಬೆಂಗಳೂರು(ಸೆ.06): ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್​​ಐಲ್​​) ವತಿಯಿಂದ 5 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. ರಿಲಯನ್ಸ್ ಫೌಂಡೇಷನ್ ಮುಖಾಂತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗಾಗಿ, ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ಚೆಕ್ ನೀಡಲಾಗಿದೆ.

ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪರನ್ನು ರಿಲಯನ್ಸ್ ಇಂಡಸ್ಟ್ರೀಸ್ ಪದಾಧಿಕಾರಿಗಳು ಭೇಟಿಯಾಗಿದ್ದರು. ಈ ವೇಳೆ 5 ಕೋಟಿ ರೂಪಾಯಿಯ ಚೆಕ್ ಹಸ್ತಾಂತರಿಸಿದರು. ರಿಲಯನ್ಸ್​​ ಫೌಂಡೇಷನ್​​​ ಸ್ಟೇಟ್ ಮೆಂಟರ್ ಹಾಗೂ ಉಪಾಧ್ಯಕ್ಷ ಜಿಮ್ಮಿ ಅಮ್ರೋಲಿಯಾ, ಜಿಯೋ ಸಿಇಒ ಅಮಿತಾಭ್ ಭಾಟಿಯಾ ಹಾಗೂ ರಿಲಯನ್ಸ್ ರಿಟೇಲ್​ನ ಬ್ಯುಸಿನೆಸ್ ಹೆಡ್ ವಿಪಿನ್ ತ್ಯಾಗಿ ಖುದ್ದು ಭೇಟಿಯಾಗಿ ಮುಖ್ಯಮಂತ್ರಿಗಳಿಗೆ 5 ಕೋಟಿ ರೂಪಾಯಿಯ ಪರಿಹಾರ ಚೆಕ್ ಹಸ್ತಾಂತರಿಸಿದ್ದಾರೆ.

ರಾಜ್ಯದ ವಿವಿಧೆಡೆ ಪ್ರವಾಹದಿಂದ ಭಾರಿ ನಷ್ಟವಾಗಿದೆ. ಸಂಘ- ಸಂಸ್ಥೆಗಳು, ಉಳ್ಳವರು ಸಿಎಂ ಪರಿಹಾರ ನಿಧಿಗೆ ಧನ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈಗಾಗಲೇ ಇನ್ಪೋಸಿಸ್ ಪ್ರತಿಷ್ಠಾನದಿಂದ 10 ಕೋಟಿ ರೂ., ನಿರಾಣಿ ಫೌಂಡೇಷನ್​ನಿಂದ 1 ಕೋಟಿ ರೂ., ಬಾಗಲಕೋಟೆ ಬಿವಿವಿ ಸಂಘದಿಂದ 2 ಕೋಟಿ ರೂ., ಕೆಎಂಎಫ್ 1 ಕೋಟಿ ರೂ. ನೆರವು ಘೊಷಣೆ ಮಾಡಿವೆ.

2009ರಲ್ಲಿ ಪ್ರವಾಹ ಸ್ಥಿತಿ ಬಂದಾಗ ದಾನಿಗಳಿಂದ 1 ಸಾವಿರ ಕೋಟಿ ರೂ. ಸಂಗ್ರಹಿಸಲಾಗಿತ್ತು. ಹಾಗೆಯೇ ರಾಜ್ಯ ಸರ್ಕಾರದ 1 ಸಾವಿರ ಕೋಟಿ ರೂ. ಅನುದಾನ ಬಳಸಿಕೊಂಡು ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ಸಂತ್ರಸ್ತರಿಗೆ ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ಯುಕೆಪಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೊಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿಯೂ ಮಾಡಲಾಗಿದೆ.

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ತ್ರಿವಳಿ ನದಿಗಳ ಪ್ರವಾಹದಿಂದ ಜಿಲ್ಲೆಯ 90ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದವು. ಈ ಸ್ಥಳಗಳಿಗೆ ಸಿಎಂ ಯಡಿಯೂರಪ್ಪ ಅವರೇ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ಜಿಲ್ಲೆಯ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆಯೂ ನಡೆಸಿದ್ದರು.

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹದಿಂದಾಗಿ ಕುಡಿಯುವ ನೀರಿನ ಕೊಳವೆ ಬಾವಿ, ಟ್ಯಾಂಕರ್​ಗಳು, ಘಟಕಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಜಲಾಶಯಗಳ ಕೆಳ ಮಟ್ಟದ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗದಂತೆ ನೀರಿನ ಹೊರ ಹರಿವು ನಿಯಂತ್ರಿಸಲಾಗಿದೆ. ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳನ್ನು ಈಗಾಗಲೇ ಗುರುತಿಸಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಲಾಶಯ ಮಟ್ಟ ಮತ್ತು ಪ್ರವಾಹ ಪರಿಸ್ಥಿತಿ ಬಗ್ಗೆ ಹಿರಿಯ ಅಧಿಕಾರಿಗಳು ವಾಟ್ಸ್​ಆಪ್ ಗ್ರೂಪ್ ಮೂಲಕ ನಿರಂತರವಾಗಿ ಗಮನ ಇರಿಸಿದ್ದು, ನಿಯಂತ್ರಣ ಕೊಠಡಿ ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದೆ.

Comments are closed.