ಬೆಂಗಳೂರು: ಐತಿಹಾಸಿಕ ಸಾಧನೆ ಮಾಡಲು ಹೊರಟ್ಟಿದ್ದ ಇಸ್ರೋ ವಿಜ್ಞಾನಿಗಳು ತಡರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಕೇಂದ್ರದಿಂದ ಕದಲದೇ ಸಂಪರ್ಕ ಸಾಧಿಸಲು ಕಸರತ್ತು ನಡೆಸುತ್ತಿದ್ದರು.
ಹೌದು. 3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಆದರೆ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತು.
ತಡರಾತ್ರಿ 1.50ಕ್ಕೆ ಸಂಪರ್ಕ ಕಳೆದುಕೊಂಡರೂ ಬೆಳಗ್ಗೆ 10 ಗಂಟೆಯವರೆಗೆ ವಿಜ್ಞಾನಿಗಳು ಕೇಂದ್ರವನ್ನು ಬಿಟ್ಟು ತೆರಳದೇ ಹೇಗಾದರೂ ಮಾಡಿ ವಿಕ್ರಂ ಲ್ಯಾಂಡರ್ ಸಂಪರ್ಕ ಸಾಧಿಸಲು ಶತಪ್ರಯತ್ನ ನಡೆಸುತ್ತಿದ್ದರು. ಮುಖ್ಯವಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತು ಯೋಜನಾ ನಿರ್ದೇಶಕಿ ಎಂ ವನಿತಾ, ಮಿಷನ್ ನಿರ್ದೇಶಕಿ ರಿತು ಕರಿಧಾಲ್ ಕಂಟ್ರೋಲ್ ಕೊಠಡಿಯಲ್ಲೇ ಆಶಾಭಾವನೆಯಿಂದ ಪ್ರಯತ್ನ ನಡೆಸುತ್ತಿದ್ದರು.
ನಡೆದಿದ್ದು ಏನು?
1.39ಕ್ಕೆ ಲ್ಯಾಂಡರ್ ಚಂದ್ರನತ್ತ ಇಳಿಯುವ ಕೊನೆಯ ಸಿದ್ಧತೆ ಆರಂಭಗೊಂಡಿತ್ತು. ಇಸ್ರೋ ನಿಗದಿ ಪಡಿಸಿದ ಪಥದಲ್ಲೇ ಲ್ಯಾಂಡರ್ ಚಲಿಸುತಿತ್ತು. 1.48 ಕೇವಲ 6.ಕಿ.ಮೀ ದೂರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷವನ್ನು ಕಳೆದುಕೊಂಡಿತು. ದೊಡ್ಡ ಪರದೆಯಲ್ಲಿ ಕೆಂಪು ಬಣ್ಣದ ರೇಖೆ ಸಾಗಬೇಕಾದ ದಾರಿ ತೋರಿಸುತ್ತಿದ್ದರೆ ಹಸಿರು ಬಣ್ಣ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣದ ಮೇಲೆಯೇ ಹೋಗುತಿತ್ತು. 1.55ಕ್ಕೆ ಹಸಿರು ಬಣ್ಣದ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣವನ್ನು ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡುತ್ತಿದ್ದ ವಿಜ್ಞಾನಿಗಳು ಆಂತಕಕ್ಕೆ ಒಳಗಾದರು. ಅಲ್ಲಿಯವರೆಗೆ ಸಂಭ್ರಮದಲ್ಲೇ ಇದ್ದ ವಿಜ್ಞಾನಿಗಳು ಲ್ಯಾಂಡರಿನಿಂದ ಬರುತ್ತಿರುವ ಸಿಗ್ನಲ್ ನೋಡಿ ಮುಖದಲ್ಲಿದ್ದ ಸಂಭ್ರಮ ಮರೆಯಾಗಿ ಆತಂಕ ಹೆಚ್ಚಾಯಿತು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಕೊನೆಗೆ 2.17 ಕ್ಕೆ ಇಸ್ರೋ ಅಧ್ಯಕ್ಷ ಶಿವನ್ 2.1 ಕಿ.ಮೀ ದೂರದಲ್ಲಿದ್ದಾಗ ವಿಕ್ರಮ್ ಸಂಪರ್ಕ ಕಡಿತಗೊಂಡಿದೆ ಎಂದು ಬಹಳ ಗದ್ಗದಿತವಾಗಿ ಪ್ರಕಟಿಸಿ, ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ವಿಡಿಯೋ ವೈರಲ್: ಮಂಗಳಯಾನ ಗುರಿ ಮುಟ್ಟದಕ್ಕೆ ಬೇಸರದಲ್ಲಿದ್ದ ಶಿವನ್ ಅವರನ್ನು ಪ್ರಧಾನಿ ಮೋದಿ ಸಮಾಧಾನ ಪಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇಸ್ರೋ ಕಚೇರಿಯಿಂದ ಹೊರ ಬರುತ್ತಲೇ ಪ್ರಧಾನಿ ಮೋದಿ ಅವರನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶಿವನ್ ಅವರನ್ನು ಅಪ್ಪಿ ಬೆನ್ನು ತಟ್ಟಿ ಸಮಾಧಾನ ಪಡಿಸಿದರು.
ನಿಮ್ಮ ಜೊತೆ ಭಾರತವಿದೆ: ಬೆಳಗ್ಗೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಕೆಲವು ದಿನಗಳಿಂದ ಇಸ್ರೋ ವಿಜ್ಞಾನಿಗಳು ನಿದ್ದೆ ಮಾಡಿಲ್ಲ ಎಂದು ಎಲ್ಲರಿಗೂ ಗೊತ್ತು. ಬೆಳಗಿನ ಜಾವ ನಿಮ್ಮ ಮುಖದಲ್ಲಿ ಬೇಸರ ಭಾವ ನೋಡಿದಾಗ ಹೆಚ್ಚು ಕಾಲ ನಾನು ಅಲ್ಲಿ ಉಳಿಯಲಿಲ್ಲ. ದಿಢೀರ್ ಅಂತ ಸಂಪರ್ಕ ಕಡಿತಗೊಂಡಾಗ ನಿಮ್ಮೆಲ್ಲರ ಮುಖದಲ್ಲಿ ನಿರಾಸೆ ಮೂಡಿತು. ನಾನು ನಿಮ್ಮೆಲ್ಲರ ಮನಸ್ಸು ಅರ್ಥ ಮಾಡಿಕೊಂಡಿದ್ದೇನೆ. ಇಂದು ನಮಗೆ ಕೊನೆ ಹಂತದಲ್ಲಿ ಸಣ್ಣದೊಂದು ಅಡೆಯುಂಟಾಗಿದೆ. ಚಂದ್ರಯಾನ ಚಂದ್ರನನ್ನ ಅಪ್ಪಿಕೊಳ್ಳುವ ನಮ್ಮ ಇಚ್ಛಾಶಕ್ತಿ ಮತ್ತಷ್ಟು ಪ್ರಬಲಗೊಂಡಿದೆ. ಸಣ್ಣದೊಂದು ಅಡೆ ತಡೆಯಿಂದ ನಾವು ಹಿಂಜರಿಯದೇ ಅದರ ಪರಿಹಾರಕ್ಕಾಗಿ ಮುಂದಿನ ದಿನ ಕೆಲಸ ಮಾಡಬೇಕಿದೆ. ಕವಿಗಳು ಚಂದ್ರನ ಬಗ್ಗೆ ಹಲವು ಕವಿತೆಗಳನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಯಾನದ ಬಗ್ಗೆ ಕವನಗಳನ್ನು ಬರೆಯಲಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಇದೆ. ಚಂದ್ರನನ್ನ ಮುಟ್ಟುವ ಆಸೆ ಇನ್ನಷ್ಟು ಹೆಚ್ಚಾಗಿದೆ ಎಂದರು.
ನಿಮ್ಮ ಕಠಿಣ ಪರಿಶ್ರಮ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇಡೀ ಭಾರತ ನಮ್ಮ ಇಸ್ರೋ ವಿಜ್ಞಾನಿಗಳೊಂದಿಗೆ ಇದೆ. ಅಡೆತಡೆಗಳಿಂದ ನಿಮ್ಮ ಉತ್ಸಾಹ ಹೆಚ್ಚಾಗಿದೆ. ತೊಂದರೆಗಳು ಎದುರಾಗಿವೆ ಎಂದು ಧೃತಿಗಡೆಬಾರದು. ಸತತ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ವಿಫಲತೆಗೆ ಎದೆಗುಂದದೆ, ಗುರಿ ತಲುಪವಲ್ಲಿ ನಮ್ಮ ಕೆಲಸ ಆರಂಭವಾಗಬೇಕಿದೆ. ನೀವು ಮಾಡಿದ್ದನ್ನು, ಇದೂವರೆಗೂ ಯಾರು ಮಾಡಿಲ್ಲ. ನಿನ್ನೆ ರಾತ್ರಿಯೂ ಹೇಳಿದಂತೆ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದರು.
ಪ್ರತಿ ಸೋಲು ಹೊಸದೊಂದನ್ನು ಕಲಿಸಿಕೊಡುತ್ತದೆ. ವಿಜ್ಞಾನದಲ್ಲಿ ಎಂದು ವಿಫಲತೆ ಆಗುವುದಿಲ್ಲ. ಎಲ್ಲ ಪ್ರಯೋಗಗಳು ನಮಗೆ ಹೊಸ ವಿಷಯವನ್ನು ಕಲಿಸಿಕೊಡುತ್ತೇವೆ. ಚಂದ್ರಯಾನದ ಕೊನೆಯ ಯಾನ ನಮ್ಮ ಯೋಜನೆಯಂತೆ ನಡೆಯಲಿಲ್ಲ ಎಂದು ನಿರಾಸೆಗೊಳ್ಳಬೇಡಿ. ನಮ್ಮ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘರ್ಷ, ಸಂಕಷ್ಟಗಳೇ ಹೊಸ ಅವಿಷ್ಕಾರಕ್ಕೆ ನಾಂದಿಯಾಗಲಿದೆ. ನಿಮ್ಮೆಲ್ಲರ ದಶಕಗಳ ಪರಿಶ್ರಮದಿಂದ ಇಂದು ಸ್ಪೇಸ್ ಸೈನ್ಸ್ ನಲ್ಲಿ ನಾವು ಮೊದಲಿಗರಾಗಿದ್ದೇವೆ. ಚಂದ್ರಯಾನ-2 ಮಿಷನ್ ಕೊನೆ ಹಂತ ಬೇಸರ ತಂದಿರಬಹುದು. ಆದ್ರೆ ನಮ್ಮ ಚಂದ್ರಯಾನದ ಪ್ರಯಾಣ ಅದ್ಧೂರಿಯಾಗಿತ್ತು. ಜ್ಞಾನಕ್ಕಿಂತ ದೊಡ್ಡ ಶಿಕ್ಷಣ ವಿಜ್ಞಾನ. ಮುಂದಿನ ಎಲ್ಲ ಯೋಜನೆಗಳಿಗೆ ಶುಭವಾಗಲಿ ಎಂದು ಪ್ರಧಾನಿಗಳು ಹಾರೈಸಿದರು.
ನನಗಿಂತ ನಿಮ್ಮ ಸಂಕಲ್ಪ ದೊಡ್ಡದಿದೆ. ಇಂದು ಬೆಳ್ಳಂಬೆಳಗ್ಗೆ ನಿಮ್ಮನ್ನು ನೋಡುವ ಮೂಲಕ ಪ್ರೇರಣೆ ಪಡೆದುಕೊಳ್ಳಲು ಬಂದಿದ್ದೇನೆ. ನಿಮ್ಮೆಲ್ಲರಿಂದ ಪಡೆದ ಪ್ರೇರಣೆ ನಾನು ಮರೆಯಲಾರೆ. ನಿಮ್ಮ ಸಂಕಲ್ಪ, ಕೆಲಸ ಹೀಗೆ ಮುಂದುವರಿಯಲಿ ಎಂದು ಶುಭಕೋರಿದರು.
Comments are closed.