ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್ ಆಗಿ ಬಿಜೆಪಿಯ ಜೋಗುಪಾಳ್ಯ ವಾರ್ಡ್ ನ ಕಾರ್ಪೋರೇಟರ್ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ಕೇಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮೇಯರ್ ಹುದ್ದೆಗೆ ಬಿಜೆಪಿಯಿಂದ ಗೌತಮ್ ಕುಮಾರ್ ಮತ್ತು ಪದ್ಮನಾಭರೆಡ್ಡಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು, ಅಂತಿಮವಾಗಿ ಪದ್ಮನಾಭ ರೆಡ್ಡಿ ನಾಮಪತ್ರ ವಾಪಸ್ ಪಡೆದಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳಿಂದ ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಸತ್ಯನಾರಾಯಣ ಹಾಗೂ ಉಪಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನ ಗಂಗಮ್ಮ ಕಣದಲ್ಲಿದ್ದರು
ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಸದಾನಂದಗೌಡ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಬಚ್ಚೇಗೌಡ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಎಲ್. ಹನುಮಂತಯ್ಯ, ಸಚಿವ ಆರ್.ಅಶೋಕ್, ಶಾಸಕಿ ಸೌಮ್ಯರೆಡ್ಡಿ ಮತ್ತಿತರರು ಭಾಗವಹಿಸಿದ್ದರು. ಕಾಂಗ್ರೆಸ್ ನ ಜೈರಾಮ್ ರಮೇಶ್ ಮತ್ತು ಡಿ.ಕೆ ಸುರೇಶ್ ಹಾಗೂ ಬಿಜೆಪಿಯ ನಿರ್ಮಲಾ ಸೀತರಾಮನ್ ಮತದಾನಕ್ಕೆ ಗೈರಾಗಿದ್ದಾರೆ.
ಬಿಬಿಎಂಪಿಯಲ್ಲಿ ಒಟ್ಟು 257 ಇದ್ದು. ಬಿಜೆಪಿಗೆ 125, ಕಾಂಗ್ರೆಸ್ 104, ಜೆಡಿಎಸ್ 21 ಹಾಗೂ 7 ಪಕ್ಷೇತರ ಕಾರ್ಪೋರೇಟರ್ ಗಳಿದ್ದಾರೆ. ಮೇಯರ್ ಪಟ್ಟಕ್ಕಾಗಿ ಮ್ಯಾಜಿಕ್ ನಂಬರ್ 129 ಆಗಿದೆ. ಬಿಜೆಪಿಯ 125 ಹಾಗೂ ಪಕ್ಷೇತರರು 5 ಮಂದಿ ಮತ ಚಲಾಯಿಸಿದ್ದಾರೆ. ಗೌತಮ್ ಅವರ ಪರವಾಗಿ 129 ಮತಗಳು ಚಲಾವಣೆಯಾಗಿದೆ.
ಜೋಗುಪಾಳ್ಯ ವಾರ್ಡ್ ಸಂಖ್ಯೆ 89ರ ಸದಸ್ಯ ಬಿಜೆಪಿಯ ಗೌತಮ್ ಕುಮಾರ್ ಜೈನ್ ಬಿ.ಕಾಂ ಪದವೀಧರ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಬೆಂಗಳೂರು ಕಾರ್ಯದರ್ಶಿಯಾಗಿದ್ದ ಗೌತಮ್ ಜೈನ್, 2013-14ರಲ್ಲಿ ಬಿಬಿಎಂಪಿ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆರ್.ಎಸ್.ಎಸ್. ಹಿನ್ನೆಲೆ ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವರು ಎರಡು ಬಾರಿ ಕಾರ್ಪರೇಟರ್ ಆಗಿ ಆಯ್ಕೆಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೌತಮ್, ತಮ್ಮ ಪಕ್ಷ ಬಿಜೆಪಿ ರಾಷ್ಟ್ರ ಮೊದಲು ಎಂಬ ಧ್ಯೇಯದಲ್ಲಿ ನಂಬಿಕೆಯಿಟ್ಟಿದೆ. ಅಭಿವೃದ್ಧಿಯೇ ನಮ್ಮ ಮಂತ್ರ. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಕನಸು ನನಸಾಗಿಸುವತ್ತ ಪ್ರಯತ್ನ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರ ನಾಯಕರ ಸಲಹೆ ಮೇರೆಗೆ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ನಗರದ ಅಗತ್ಯಗಳು, ಹಣಕಾಸು ಸ್ಥಿತಿಗತಿ ಪರಿಶೀಲಿಸಿ ಜನಪರ ಬಜೆಟ್ ಮಂಡಿಸಲಾಗುವುದು ಎಂದರು.
Comments are closed.