ಬಾಗಲಕೋಟೆ : ಮಲಪ್ರಭಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತ ಮಹಿಳೆಯೊಬ್ಬರು ಉಪ ವಿಭಾಗಾಧಿಕಾರಿ ವಾಹನಕ್ಕೆ ತನ್ನ ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಬಾದಾಮಿ ತಾಲೂಕು ಬೀರನೂರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬೀರನೂರಿನ ಲಕ್ಷ್ಮವ್ವ ಬಸಪ್ಪ ಹದ್ಲಿ (ಕಿತ್ತೂರ) ಎಂಬ ಮಹಿಳೆ, ಗ್ರಾಮಕ್ಕೆ ಮೂರನೆ ಬಾರಿ ನುಗ್ಗಿದ ಮಲಪ್ರಭಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡಿದ್ದಾರೆ. ಇತ್ತ ತಾಲೂಕು ಆಡಳಿತ ಶೆಡ್ ಕೂಡ ನಿರ್ಮಿಸಿಲ್ಲ.
ಬಯಲು ಜಾಗದಲ್ಲಿ ತನ್ನ ಜಾನುವಾರುಗಳೊಂದಿಗೆ ವಾಸವಾಗಿರುವ ಮಹಿಳೆ, ಮಂಗಳವಾರ ಸಂಜೆ ಗ್ರಾಮಕ್ಕೆ ಆಗಮಿಸಿದ್ದ, ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ತೋಡಿಕೊಂಡಿದ್ದರು. ಇದೇ ವೇಳೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಅವರೂ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಎಸಿ ಗಂಗಪ್ಪ ಕಾರಿಗೆ ತನ್ನ ಎಮ್ಮೆ ಕಟ್ಟಿದ ಮಹಿಳೆ, ಇರಾಕ್ ಮನಿ ಇಲ್ಲ. ಶೆಡ್ ಕಟ್ಟಿಲ್ಲ. ನಾವು ಎಲ್ಲಿ ಇರೂನ. ಎಮ್ಮಿ ಎಲ್ಲಿ ಕಟ್ಟೂನು. ನಮಗ್ ಶೆಡ್ ಕಟ್ಟಿಸಿ ಕೊಟ್ಟು ಇಲ್ಲಿಂದ ಹೋಗ್ರಿ ಎಂದು ಒತ್ತಾಯಿಸಿದಳು.
ಬಳಿಕ ಪೊಲೀಸರು, ಆಗಮಿಸಿ, ಮಹಿಳೆಯ ಮನವೋಲಿಸಿ, ಕಾರಿಗೆ ಕಟ್ಟಿದ್ದ ಎಮ್ಮೆಯನ್ನು ತೆರವುಗೊಳಿಸಿದರು. ನಂತರ ಎಸಿ ಗಂಗಪ್ಪ, ಬಾದಾಮಿ ತಾಲೂಕಿನ ಪ್ರವಾಹ ಪೀಡಿತ ಬೇರೊಂದು ಗ್ರಾಮಕ್ಕೆ ತೆರಳಿದರು.
Comments are closed.