ಚನ್ನಪಟ್ಟಣ : ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್.ಕಾಲೋನಿ ಗ್ರಾಮ ಈಚೆಗೆ ಸುದ್ದಿಯಾಗಿದ್ದು ವಿಚಿತ್ರವಾದ ಹುಣಸೆ ಮರವೊಂದರಿಂದ. ಇಲ್ಲಿನ ಹುಣಸೆ ಮರವೊಂದರಲ್ಲಿ ಬಿಡುತ್ತಿದ್ದ ರಕ್ತದ ಬಣ್ಣದ ಹುಣಸೆ ಹಣ್ಣು ಅಚ್ಚರಿಗೆ ಕಾರಣವಾಗಿತ್ತು.
ನೋಡಲು ಮಾಮೂಲಿ ಹುಣಸೆ ಹಣ್ಣಿನಂತೆ ಕಂಡರೂ ಒಳಗೆ ಕಡುಗೆಂಪು ಬಣ್ಣದ ತಿರುಳು ಕಾಣಿಸಿಕೊಂಡಿದ್ದು ಆಶ್ಚರ್ಯದೊಂದಿಗೆ ಕುತೂಹಲಕ್ಕೂ ಎಡೆಮಾಡಿಕೊಟ್ಟಿತ್ತು. ಗ್ರಾಮದ ಕೆಲವರು ಇದಕ್ಕೆ ಧಾರ್ಮಿಕ ಕಾರಣವನ್ನೂ ನೀಡಿದ್ದರು. ಇಲ್ಲಿನ ಮಹಿಳೆಯರು ಇದರಲ್ಲಿ ಅಡುಗೆಯನ್ನೂ ಮಾಡಿ ಪ್ರಯೋಗಿಸಿದ್ದರು. ಇದೀಗ ಈ ಹುಣಸೆ ಹಣ್ಣಿನ ಹಿಂದಿನ ಅಸಲಿತನವನ್ನು ತಜ್ಞರು ಬಿಡಿಸಿದ್ದಾರೆ. ಹುಣಸೆ ಕುರಿತ ತಜ್ಞರ ವಿಶ್ಲೇಷಣೆ ಇಲ್ಲಿದೆ…25 ವರ್ಷದ ಹುಣಸೆ ಮರ ಹುಣಸೆ ಹಣ್ಣು ಕೆಂಪಾಗಿದ್ದೇಕೆ?
ಚನ್ನಪಟ್ಟಣ ಮತ್ತು ರಾಮನಗರದ ಗಡಿ ಸಮೀಪದ ಜಮೀನಿನಲ್ಲಿ ಈ ವಿಚಿತ್ರ ಹುಣಸೆ ಮರವಿದೆ. ಸುಮಾರು 25 ವರ್ಷದ ಈ ಮರ ಕಳೆದ 8 ವರ್ಷಗಳಿಂದ ಫಸಲು ನೀಡುತ್ತಿದೆ. ನೋಡಲು ಹುಣಸೆ ಕಾಯಿಯಂತೆ ಕಂಡರೂ ಇದನ್ನು ಮುರಿದರೆ ಒಳಗೆಲ್ಲ ಕೆಂಪು ಬಣ್ಣ ತುಂಬಿಕೊಂಡಿದೆ. ಹೀಗಾಗೇ ಇದಕ್ಕೆ ರಕ್ತ ಹುಣಸೆ ಎಂದು ಕರೆಯುತ್ತಾರೆ.
ರಕ್ತ ಹುಣಸೆ ಕೆಂಪು ತಿರುಳನ್ನು ಹೊಂದಿದ್ದು, ಅದು ಅಪರೂಪದ ತಳಿ. ಈ ಹುಣಿಸೆ ಹಣ್ಣಿನ ಬಲಿಯದ ಬೀಜಕೋಶಗಳ ಕೆಂಪು ಬಣ್ಣವು ನಿರ್ವಾತಗಳಲ್ಲಿ “ಆಂಥೋಸಯಾನಿನ್” ಇರುವುದರಿಂದ ಉಂಟಾಗುತ್ತದೆ. ಆಂಥೋಸಯಾನಿನ್ ಒಂದು ವರ್ಣದ್ರವ್ಯವಾಗಿದ್ದು ಅದು ನೈಸರ್ಗಿಕವಾಗಿ ನೀರಿನಲ್ಲಿ ಕರಗಬಲ್ಲದು.
ರಕ್ತ ಹುಣಸೆ ಹಣ್ಣು ಆಯುರ್ವೇದದಲ್ಲಿ ಅನೇಕ ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ. ರಾಜ್ಯದಲ್ಲಿ ಹುಣಸೆಯಲ್ಲಿ ಹುಣಸೆ, ಮಲೆನಾಡ ಹುಣಸೆ, ಕೆಂಪು ಹುಣಸೆಗಳೆಂದು ಬೇರೆಬೇರೆ ತಳಿಗಳ ಪ್ರಬೇಧಗಳಿದ್ದು, ಎಲ್ಲವೂ ಉಪಯುಕ್ತವಾಗಿವೆ. ನಿತ್ಯೋಪಯೋಗಿ ಹುಣಸೆ ಹಣ್ಣಿನ ಮರಗಳು ಅಲ್ಲಲ್ಲಿ ಕಂಡು ಬರುತ್ತಿದ್ದರೂ ಬಹುಪಯೋಗಿ ಕೆಂಪು ಹುಣಸೆ ಮರಗಳು ತೀರಾ ವಿರಳ. ಶಿರಸಿ, ಸಿದ್ದಾಪುರ ಅರಣ್ಯ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತವೆ.
Comments are closed.