ಬೆಂಗಳೂರು: ಬೆಂಗಳೂರಿನ ಆದಾಯ ತೆರಿಗೆ ಇಲಾಖೆ(ಐಟಿ)ಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ.
ಗುರುವಾರ ಸಂಜೆಯೊಳಗಾಗಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್‌ನಲ್ಲಿ ಬೆದರಿಸಲಾಗಿದೆ. ಶ್ವಾನದಳ, ಬಾಂಬ್ ಪತ್ತೆ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಪರಿಶೀಲನೆ ಆರಂಭವಾಗಿದೆ.
ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ಗೆ ತಡರಾತ್ರಿ 10.45ಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಕೂಡಲೇ 300 ಪೊಲೀಸರು ಕಸ್ಟಮ್ಸ್ ಮತ್ತು ಐಟಿ ಕಚೇರಿಗೆ ದೌಡಾಯಿಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ರಾತ್ರಿ ಇಡೀ ತಪಾಸಣೆ ನಡೆಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಈ ಹಿಂದೆಯೂ ಐಟಿ ಕಚೇರಿಗೆ ಹುಸಿ ಬಾಂಬ್ ಕರೆ ಬಂದಿತ್ತು. 1991-92ರಲ್ಲಿ ಒಂದು ದಿನ ಬೆಳಗ್ಗೆ 11.30ರ ಹೊತ್ತಿಗೆ ಫೋನ್ ಕರೆ ಬಂದು ಗೊಂದಲ ಉಂಟಾಗಿತ್ತು ಎಂಬುದನ್ನು ಹಿರಿಯ ಉದ್ಯೋಗಿಗಳು ನೆನಪಿಸಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರೋಟಾನ್ ಡಾರ್ಕ್ ನೆಟ್ ಮೂಲಕ ಇ-ಮೇಲ್ ರವಾನೆಯಾಗಿದೆ. ಐಟಿ ಉದ್ಯೋಗಿ ಗೋವಿಂದ್ ಎಂಬಾತ ಇ-ಮೇಲ್ ರವಾನಿಸಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ.
ಈ ಹಿಂದೆ ಹೈಕೋರ್ಟ್‌ಗೆ ಬಾಂಬ್ ಇಡುವುದಾಗಿ ಓರ್ವ ಕರೆ ಮಾಡಿ ಬೆದರಿಕೆ ಹಾಕಿದ್ದ, ಬಳಿಕ ಮಾವನಿಗೆ ಉಗ್ರ ಪಟ್ಟ ಕಟ್ಟಲು ಆತ ಸುಳ್ಳು ಹೇಳಿದ್ದ ಎನ್ನುವುದು ಹಲವು ದಿನಗಳ ಬಳಿಕ ಬಹಿರಂಗಗೊಂಡಿತ್ತು.
ಇದೀಗ ಹಲವಾರು ಹಗರಣಗಳ ಬಯಲಿಗೆಳೆಯುವ ಐಟಿ ಇಲಾಖೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ಆತಂಕ್ಕೀಡು ಮಾಡಿದೆ. ಇ-ಮೇಲ್ ಎಲ್ಲಿಂದ ಬಂದಿದೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳವು ಬೆಳಗ್ಗೆಯಿಂದಲೇ ಕಚೇರಿಗೆ ಸಭಾಂಗಣಕ್ಕೆ ಬಂದಿವೆ.
ಕಳೆದ ಒಂದೆರೆಡು ದಿನಗಳ ಹಿಂದೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಒಂದು ಸ್ಪೋಟಗೊಂಡು ವ್ಯಕ್ತಿ ಕೈಗೆ ಗಂಭೀರ ಗಾಯವಾಗಿತ್ತು.. ಇದೀಗ ಬಾಂಬ್ ಬೆದರಿಕೆ ಬಂದಾಕ್ಷಣ ಅದನ್ನು ನಿರ್ಲಕ್ಷಿಸುವಹಾಗಿಲ್ಲ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.
Comments are closed.