ಕರ್ನಾಟಕ

ಬಿಎಂಟಿಸಿ ಬಸ್‌ಗಳಿಗೆ ಹೊಸ ಲಾಂಛನದಿಂದಿಗೆ ನಾಮಕರಣ “ನಿಮ್ಮ ಬಸ್”

Pinterest LinkedIn Tumblr

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳು ಪ್ರತ್ಯೇಕ ಪಥದಲ್ಲಿ ನವೆಂಬರ್ 1 ರಿಂದ ಸಂಚಾರ ನಡೆಸಲಿವೆ. ಈ ಬಸ್‌ಗಳಿಗೆ ಚೆಂದದ ಹೆಸರನ್ನು ಇಡಲಾಗಿದ್ದು, ಲಾಂಛನ ಅನಾವರಣ ಮಾಡಲಾಗಿದೆ.

ಬೈಯಪ್ಪನಹಳ್ಳಿ-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥದಲ್ಲಿ ಬಸ್ ಸಂಚಾರ ಮಾಡುತ್ತಿದೆ. ಅಕ್ಟೋಬರ್ 20ರಿಂದ ಬಸ್‌ಗಳ ಪ್ರಾಯೋಗಿಕ ಸಂಚಾರ ಆರಂಭಗೊಂಡಿದ್ದು, ಈ ಮಾರ್ಗದಲ್ಲಿ ಸಂಚಾರ ನಡೆಸುವ ಬಸ್‌ಗಳಿಗೆ ಪ್ರತ್ಯೇಕ ಹೆಸರು, ಲಾಂಛನ ಬಿಡುಗಡೆ ಮಾಡಲಾಗಿದೆ.

‘ನಿಮ್ಮ ಬಸ್’ ಉತ್ತಮ ಸಂಚಾರಕ್ಕಾಗಿ ಎಂಬ ಹೆಸರನ್ನು ಬಿಎಂಟಿಸಿ ಬಸ್‌ಗಳಿಗೆ ಇಡಲಾಗಿದೆ. ಪ್ರತ್ಯೇಕ ಬಸ್‌ ಪಥದಲ್ಲಿ ಸಂಚಾರ ನಡೆಸುವ ಎಲ್ಲಾ ಬಸ್‌ಗಳ ಮೇಲೆ NIMBUS ಎಂದು ಬರೆಯಲಾಗುತ್ತದೆ ಮತ್ತು ಲಾಂಛನವನ್ನು ಚಿತ್ರಿಸಲಾಗುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ 12 ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡಲಾಗುತ್ತಿದೆ. ಪ್ರಾಯೋಗಿಕ ಸಂಚಾರ ಈಗಾಗಲೇ ಆರಂಭವಾಗಿದ್ದು, ನವೆಂಬರ್ 1 ರಿಂದ ಪ್ರತ್ಯೇಕ ಬಸ್ ಪಥದಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ.

ರಸ್ತೆಯ ಎಡಭಾಗದಲ್ಲಿ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಬೇಕು. 3.5 ಮೀಟರ್ ಪ್ರತ್ಯೇಕ ಮಾರ್ಗವನ್ನು ಬಸ್‌ಗಳಿಗಾಗಿ ನಿರ್ಮಾಣ ಮಾಡಲಾಗಿದೆ. ಬೊಲ್ಲಾರ್ಡ್‌ಗಳನ್ನು ಹಾಕಿ ಪ್ರತ್ಯೇಕ ಪಥ ನಿರ್ಮಿಸಲಾಗಿದ್ದು, ಬೇರೆ ವಾಹನ ಈ ಮಾರ್ಗದಲ್ಲಿ ಸಂಚಾರ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ.

ಕೆ. ಆರ್. ಪುರದ ಟಿನ್ ಫ್ಯಾಕ್ಟರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ 18.5 ಕಿ. ಮೀ. ಉದ್ದದ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ. ನಗರದ ಉಳಿದ 11 ಮಾರ್ಗದಲ್ಲಿ ಪ್ರತ್ಯೇಕ ಪಥವನ್ನು ಶೀಘ್ರದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ 6500 ಬಿಎಂಟಿಸಿ ಬಸ್‌ಗಳಿವೆ. ಇವುಗಳಲ್ಲಿ ಸುಮಾರು 6 ಸಾವಿರ ಬಸ್‌ಗಳು ಪ್ರತಿನಿತ್ಯ ರಸ್ತೆಗೆ ಇಳಿಯುತ್ತವೆ. ಸಂಚಾರ ದಟ್ಟಣೆಯಲ್ಲಿ ಬಸ್‌ಗಳು ಸಿಲುಕುವುದರಿಂದ ನಿಗದಿತ ಸಮಯಕ್ಕೆ ಅವುಗಳು ನಿಲ್ದಾಣ ತಲುಪುವುದು ತಡವಾಗುತ್ತಿದೆ. ಆದ್ದರಿಂದ, ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗುತ್ತಿದೆ.

Comments are closed.