ಕರ್ನಾಟಕ

ಗೋಕಾಕ್ ನ ಮಲ್ಲಿಕಾರ್ಜುನ ಗುಡ್ಡದಲ್ಲಿನ ಬೃಹತ್ ಬಂಡೆ “ಆಪರೇಷನ್ ಬಂಡೆ” ಕಾರ್ಯಾಚರಣೆ ಯಶಸ್ಸು.

Pinterest LinkedIn Tumblr

ಬೆಳಗಾವಿ : ಗೋಕಾಕ್ ನ ಮಲ್ಲಿಕಾರ್ಜುನ ಗುಡ್ಡದಲ್ಲಿನ ಬೃಹತ್ ಬಂಡೆಗಳನ್ನು ತೆರವುಗೊಳಿಸಲು ಕೈಗೊಂಡಿದ್ದ “ಆಪರೇಷನ್ ಬಂಡೆ” ಕಾರ್ಯಾಚರಣೆ ಯಶಸ್ವಿಯಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಲ್ಲಿಕಾರ್ಜುನ ಬೆಟ್ಟದಲ್ಲಿನ ಬೃಹತ್ ಬಂಡೆಗಲ್ಲುಗಳ ಕೆಳಗಿನ ಮಣ್ಣು ಮಳೆಯಿಂದಾಗಿ ಕುಸಿತಗೊಂಡು ಬೀಳುವ ಹಂತ ತಲುಪಿದ್ದವು. ಇದರಿಂದ ಆತಂಕ ಸೃಷ್ಟಿಯಾಗಿತ್ತು. ಬಂಡೆಗಲ್ಲು ಗೋಕಾಕ್ ನಗರದ ಮೋವಿನ್ ಗಲ್ಲಿ, ಮರಾಠಾ ಗಲ್ಲಿ, ಸಿದ್ದೇಶ್ವರ ಕಾಲೋನಿಯ ಮೇಲೆ ಅಪ್ಪಳಿಸುವ ಸಾಧ್ಯತೆ ಹಿನ್ನಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ಮನೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.

ಈ ಬೃಹತ್ ಬಂಡೆಗಳನ್ನು ತೆರವುಗೊಳಿಸಲು ನಿನ್ನೆಯಿಂದಲೂ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಎನ್‌ಡಿಆರ್ ಎಫ್ ಸಿಬ್ಬಂದಿ, ತಹಶೀಲ್ದಾರ್ ಮತ್ತು ಸತೀಶ್ ಜಾರಕಿಹೊಳಿ ಫೌಂಡೇಷನ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ನಿನ್ನೆ 110 ಟನ್ ತೂಕದ ಒಂದು ಬಂಡೆಗಲ್ಲನ್ನು ನಾಲ್ಕು ಬಾರಿ ಸ್ಫೋಟಿಸಿ ಕರಗಿಸಲಾಗಿದ್ದು, ಇಂದು 210 ಟನ್ ತೂಕದ ಬೃಹತ್ ಬಂಡೆಯನ್ನು ಮೂರು ಬಾರಿ ಸ್ಫೋಟಿಸಿ ಕರಗಿಸಲಾಗಿದೆ.

40 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಚೂರಾದ ಬಂಡೆಗಳನ್ನು ಬಂಡೆ ಇದ್ದ ಸ್ಥಳದ ಮುಂಭಾಗದಲ್ಲಿ ಗುಂಡಿ ತೋಡಿ ಮುಚ್ಚಲಾಗಿದೆ. ಆಪರೇಷನ್ ಬಂಡೆ ಸಕ್ಸಸ್ ಹಿನ್ನೆಲೆ ಸ್ಥಳೀಯ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.