ಕರ್ನಾಟಕ

ಇಸ್ರೋದಿಂದ ಚಂದ್ರಯಾನ-3ಕ್ಕೆ ಭರದ ಸಿದ್ಧತೆ

Pinterest LinkedIn Tumblr

ಬೆಂಗಳೂರು : ಚಂದ್ರನ ಮೇಲೆ ಇಳಿಯುವ ಮೊದಲ ಯತ್ನ (ಚಂದ್ರಯಾನ-2) ಕಳೆದ ಸೆಪ್ಟೆಂಬರ್‌ನಲ್ಲಿ ವಿಫಲವಾದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಚಂದ್ರಯಾನ-3ಕ್ಕೆ ಸಿದ್ಧತೆ ನಡೆಸಿದೆ. 2020ರ ನವೆಂಬರ್ ಒಳಗಾಗಿ ಚಂದ್ರಯಾನ-3 ಮಿಷನ್ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಈ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ನಿಂದ ಒಂದು ಸಮಗ್ರ ಸಮಿತಿ ಮತ್ತು ಮೂರು ಉಪ ಸಮಿತಿಗಳು ಸೇರಿದಂತೆ ಹಲವು ಸಮಿತಿಗಳನ್ನು ರಚಿಸಿ ನಾಲ್ಕು ಉನ್ನತ ಮಟ್ಟದ ಸಭೆಗಳನ್ನು ನಡೆಸಿ ಭರದ ಸಿದ್ಧತೆ ಕೈಗೊಂಡಿದೆ. ಈಗಾಗಲೇ ಚಂದ್ರಯಾನ-2 ಆರ್ಬಿಟರ್ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಿಷನ್‌ನಲ್ಲಿ ಲ್ಯಾಂಡರ್ ಮತ್ತು ರೋವರ್ ಮಾತ್ರ ಇರುತ್ತದೆ. ಮಂಗಳವಾರ ಸಮಗ್ರ ಸಮಿತಿ ಸಭೆ ಸೇರಿ ಚಂದ್ರಯಾನ-3ರ ಸಂಯೋಜನೆಯ ಪರಾಮರ್ಶೆ ನಡೆಸಿತು. ಪ್ರೊಪಲ್ಷನ್, ಸೆನ್ಸಾರ್, ಒಟ್ಟಾರೆ ಎಂಜಿನಿಯರಿಂಗ್, ಪಥದರ್ಶಕ ಮತ್ತು ಮಾರ್ಗದರ್ಶನ ಉಪಸಮಿತಿಗಳ ಶಿಫಾರಸುಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ಚಂದ್ರಯಾನ-3 ಮಿಷನ್‌ನ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಇಳಿಯುವ ಜಾಗದ ಆಯ್ಕೆ, ಪರಿಪೂರ್ಣ ಪಥದರ್ಶಕ ಮತ್ತು ಸ್ಥಳೀಯ ಪಥದರ್ಶಕ ವ್ಯವಸ್ಥೆ ಸೇರಿದಂತೆ ಮಿಷನ್‌ನ 10 ನಿರ್ದಿಷ್ಟ ಆಯಾಮಗಳನ್ನು ಪರಿಶೀಲಿಸಲಾಗಿದೆ. ಎರಡು ತಜ್ಞರ ಸಮಿತಿಯ ಶಿಫಾರಸುಗಳ ಆಧಾರಲ್ಲಿ ಲ್ಯಾಂಡರ್ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಹಾಗೂ ಸುಧಾರಣೆ ಕುರಿತಂತೆ ಕ್ರಮ ಕೈಗೊಳ್ಳಲು ಅಧಿಕೃತ ಸೂಚನೆ ನೀಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈ ಬಾರಿಯ ಮಿಷನ್‌ನ ಪ್ರಮುಖ ಆದ್ಯತೆಯೆಂದರೆ ಲ್ಯಾಂಡರ್‌ನ ಕಾಲುಗಳನ್ನು ಬಲಪಡಿಸುವುದು. ಹೀಗೆ ಅತ್ಯಧಿಕ ವೇಗದಲ್ಲಿ ಕೂಡಾ ಇದು ಸಮರ್ಪಕವಾಗಿ ಇಳಿಯುವಂತೆ ಅನುವು ಮಾಡಿಕೊಡಲಿದೆ. ಹೊಸ ಲ್ಯಾಂಡರ್ ಹಾಗೂ ರೋವರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಲ್ಯಾಂಡರ್‌ನ ಪೇಲೋಡ್ ಸಂಖ್ಯೆಯ ಬಗ್ಗೆ ಮಾತ್ರ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಮಿಷನ್‌ನಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಯೊಬ್ಬರು ವಿವರ ನೀಡಿದ್ದಾರೆ.

Comments are closed.