ಕರ್ನಾಟಕ

ಈ ವರ್ಷದ ಮಾರ್ಚ್‌ ಅಂತ್ಯಕ್ಕೆ 500 ಸೇವೆಗಳೂ ಆನ್‌ಲೈನ್‌

Pinterest LinkedIn Tumblr


ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸರ್ಕಾರವು “ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ’ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಆರಂಭ ಗೊಂಡ ಮೂರು ದಿನಗಳ “ಬೆಂಗಳೂರು ಟೆಕ್‌ ಸಮಿಟ್‌-2019’ಗೆ ಚಾಲನೆ ನೀಡಿ ಮಾತನಾಡಿ, ಹೂಡಿಕೆ, ಕೈಗಾರಿಕೆ ಬೆಳವಣಿಗೆ, ಮೂಲಸಂಪನ್ಮೂಲ ಅಭಿವೃದ್ಧಿ, ಆ ಮೂಲಕ ಐಟಿ ಕ್ಷೇತ್ರದಲ್ಲಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಇದರ ಮುಖ್ಯ ಉದ್ದೇಶ ಆಗಿರಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ)ಗೆ ಸಹಿ ಹಾಕದಿರುವುದಕ್ಕೆ ಹೂಡಿಕೆದಾರರು ಆತಂಕಪಡ ಬೇಕಾಗಿಲ್ಲ. ರೈತರು ಮತ್ತು ಬಡವರ ಹಿತದೃಷ್ಟಿಯಿಂದ ಪ್ರಧಾನಿ ಆರ್‌ಸಿಇಪಿಗೆ ಸಹಿ ಹಾಕಲಿಲ್ಲ. ಹಾಗಂತ ಹೂಡಿಕೆದಾರರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದಲ್ಲ. ಜನ, ದೇಶದ ಹಿತದೃಷ್ಟಿ ಜತೆಗೆ ಹೂಡಿಕೆದಾರರು ಮತ್ತು ಉದ್ಯಮಿಗಳ ಬಗ್ಗೆಯೂ ಅವರಿಗೆ ಕಾಳಜಿ ಇದೆ. ಆದ್ದರಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದರು.

ಆನ್‌ಲೈನ್‌ ಲಭ್ಯ: ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ ಬಹುತೇಕ ಎಲ್ಲ ಸೇವೆಗಳು ಬರುವ ಮಾರ್ಚ್‌ ಅಂತ್ಯದೊಳಗೆ ಆನ್‌ಲೈನ್‌ನಲ್ಲೇ ಲಭ್ಯವಾಗಲಿವೆ ಎಂದರು. ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳನ್ನು ಒದಗಿಸಲು ಸಕಾಲ ಯೋಜನೆ ಜಾರಿಗೊಳಿಸಲಾಗಿದ್ದು, ಇದರ ವ್ಯಾಪ್ತಿಗೆ 500 ಸೇವೆಗಳನ್ನು ತರಲಾಗಿದೆ. ಈ ಪೈಕಿ 300ಕ್ಕೂ ಹೆಚ್ಚು ಈಗಾಗಲೇ ಆನ್‌ಲೈನ್‌ನಲ್ಲೇ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, 2020ರ ಮಾರ್ಚ್‌ ಅಂತ್ಯಕ್ಕೆ ಉಳಿದ 200 ಸೇವೆಗಳೂ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ.

ಆಗ, ಅರ್ಜಿದಾರ ಜಗತ್ತಿನ ಯಾವುದೇ ಮೂಲೆಯಲ್ಲಿ ಸೇವೆ ಪಡೆಯಬಹುದು ಎಂದು ಹೇಳಿದರು. ಈಸ್‌ ಆಫ್ ಡುಯಿಂಗ್‌ ಬ್ಯುಸಿನೆಸ್‌ (ಹೂಡಿಕೆ, ವ್ಯಾಪಾರ-ವಹಿವಾಟಿಗೆ ಪೂರಕ ವಾತಾವರಣ)ಗೆ ಸಂಬಂಧಿಸಿದಂತೆ ಪೂರಕ ವಾತಾವರಣ 14 ಸ್ಥಳಗಳ ಪೈಕಿ ಬೆಂಗಳೂರು ಕೂಡ ಒಂದಾಗಿದೆ. ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಜತೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಅಲ್ಲದೆ, ಸಾಕಷ್ಟು ನೀತಿ-ನಿಯಮಗಳಲ್ಲಿ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ವಿದೇಶಿ ಬಂಡವಾಳ ಹೂಡಿಕೆ ಸ್ಥಳೀಯ ವಾಗಿ 2018ರ ಅಂತ್ಯಕ್ಕೆ 36 ಬಿಲಿಯನ್‌ ಡಾಲರ್‌ ಇದೆ. ಒಟ್ಟಾರೆ ವೃದ್ಧಿ ದರ (ಜಿಡಿಪಿ) ಶೇ. 9.6ರಷ್ಟಿದ್ದು, ರಾಷ್ಟ್ರದ ಸರಾಸರಿ ಜಿಡಿಪಿ ಶೇ. 7.2ರಷ್ಟಿದೆ. ಈ ಎಲ್ಲ ಹಿನ್ನೆಲೆಯಲ್ಲಿ ತಂತ್ರಜ್ಞಾನ ಬೆಳವಣಿಗೆ ಮತ್ತು ಹೂಡಿಕೆಗೆ ಕರ್ನಾಟಕ ಹೇಳಿಮಾಡಿಸಿದ್ದಾಗಿದೆ ಎಂದು ವಿಜಯ್‌ ಭಾಸ್ಕರ್‌ 20 ದೇಶಗಳಿಂದ ಆಗಮಿಸಿದ ಪ್ರತಿನಿಧಿಗಳಿಗೆ ಮುಕ್ತ ಆಹ್ವಾನ ನೀಡಿದರು.

ವಿಜನ್‌ ಗ್ರೂಪ್‌ನ ಮಾಹಿತಿ ತಂತ್ರಜ್ಞಾನ ಅಧ್ಯಕ್ಷ ಕ್ರಿಸ್‌ ಗೋಪಾಲ್‌ ಕೃಷ್ಣ ಮಾತನಾಡಿ, ನಗರದ ಹೊಸಕೋಟೆ, ತುಮಕೂರು ರಸ್ತೆ ಸೇರಿದಂತೆ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕೆಗಳು ವಿಸ್ತರಣೆ ಆಗಬೇಕು. ಆಗ ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತುಕೊಡುವ ಅವಶ್ಯಕತೆ ಇದೆ ಎಂದು ಸಲಹೆ ಮಾಡಿದರು.

ಡಿಸಿಎಂ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ದೆಹಲಿಯ ಭಾರತೀಯ ಸಾಫ್ಟ್ವೇರ್‌ ಟೆಕ್ನಾಲಜಿ ಪಾರ್ಕ್ಸ್ ಮಹಾನಿರ್ದೇಶಕ ಡಾ.ಓಂಕಾರ್‌ ರೈ, ವಿಜನ್‌ ಗ್ರೂಪ್‌ನ ಬಯೋಟೆಕ್ನಾಲಜಿ ಅಧ್ಯಕ್ಷೆ ಕಿರಣ್‌ ಮಜೂಂದಾರ್‌ ಷಾ, ಮಣಿಪಾಲ ಗ್ಲೋಬಲ್‌ ಎಜ್ಯುಕೇಷನ್‌ ಸರ್ವಿಸಸ್‌ ಅಧ್ಯಕ್ಷ ಮೋಹನ್‌ ದಾಸ್‌ ಪೈ, ಮಾತನಾಡಿದರು. ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರ ಉಪಸ್ಥಿತರಿದ್ದರು.

Comments are closed.