ಕರ್ನಾಟಕ

ಫ‌ಲಿತಾಂಶ ವ್ಯತ್ಯಾಸವಾದರೆ ಕಾಂಗ್ರೆಸ್ ಜೊತೆ ಮೈತ್ರಿಗೆ ದೇವೇಗೌಡರ ಚಿತ್ತ

Pinterest LinkedIn Tumblr


ಬೆಂಗಳೂರು: ಉಪ ಚುನಾವಣೆ ಕಣದಲ್ಲಿ ಮತ್ತೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾತು ಜೋರಾಗಿ ಕೇಳಿಬರುತ್ತಿದೆ. ಉಪ ಚುನಾವಣೆ ಬಳಿಕ ಅಗತ್ಯಬಿದ್ದರೆ ಕೆಲವು ಷರತ್ತುಗಳೊಂದಿಗೆ ಮತ್ತೆ ಕೈಜೋಡಿಸಲು ಸಿದ್ಧ ಎಂಬ ಸಂದೇಶವನ್ನು ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ಗೆ ರವಾನಿಸಿದ್ದು, ಇದಾದ ಅನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಮಾತಿನ ಧಾಟಿ ಬದಲಾಗಿದೆ. ಅಷ್ಟೇ ಅಲ್ಲ, ಇಂಥದ್ದೊಂದು ಮೈತ್ರಿಯ ಸುಳಿವು ಸಿಕ್ಕಿಯೇ ಕಾಂಗ್ರೆಸ್‌ನ ಹಿರಿಯ ನಾಯಕರೂ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಯಾವುದೇ ಸಂದರ್ಭವನ್ನು ಎದುರಿ ಸಲು ನಿರ್ಧರಿಸಿರುವ ಬಿಜೆಪಿ ಕೇಂದ್ರ ನಾಯಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರ ಬೆಳವಣಿಗೆ ಅನಂತರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅಂದುಕೊಂಡಷ್ಟು ಸೀಟು ಲಭ್ಯವಾಗದು ಎಂಬ ಲೆಕ್ಕಾಚಾರ ಹಾಕಿರುವ ದೇವೇಗೌಡರು, ಮುಂದಿನ ನಡೆ ಬಗ್ಗೆ ಯೋಜನೆ ರೂಪಿಸಿದ್ದಾರೆ. ಒಂದು ವೇಳೆ ಬಿಜೆಪಿ ಸರಕಾರ ಪತನಗೊಳ್ಳುವ ಸ್ಥಿತಿ ನಿರ್ಮಾಣವಾದರೆ, ಕಾಂಗ್ರೆಸ್‌ ಒಪ್ಪಿದರೆ ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ರಾಜ್ಯದ ಕೆಲವು ಕಾಂಗ್ರೆಸ್‌ ನಾಯಕರ ಮೂಲಕವೇ ಕಳುಹಿಸಿದ್ದಾರೆ. ಅಹ್ಮದ್‌ ಪಟೇಲ್‌, ಗುಲಾಂ ನಬಿ ಆಜಾದ್‌ ಅವರು ದೇವೇಗೌಡರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಮತ್ತೆ ಮೈತ್ರಿ ಏರ್ಪಡುವ ಸ್ಥಿತಿ ನಿರ್ಮಾಣ ವಾದರೆ ಸಿಎಂ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಿದ್ಧ. ನಮಗೆ ಡಿಸಿಎಂ ಸ್ಥಾನ ಸಾಕು. ಆದರೆ ಕೆಲವು ಷರತ್ತಿಗೆ ಒಪ್ಪಿಕೊಳ್ಳ ಬೇಕಾಗಬಹುದು. ಅದೇನು ಎಂಬುದನ್ನು ಮರು ಮೈತ್ರಿ ಮಾತುಕತೆಗೆ ಕುಳಿತಾಗ ಪ್ರಸ್ತಾವಿಸುವುದಾಗಿ ತಿಳಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಹತ್ತು ಸ್ಥಾನ ಗೆಲ್ಲಲು ಮಾಸ್ಟರ್‌ ಪ್ಲಾನ್‌
ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಮರು ಮೈತ್ರಿ ಸಾಧ್ಯತೆಗಳು ಹುಣಸೂರು, ಚಿಕ್ಕಬಳ್ಳಾಪುರ, ಯಶವಂತಪುರ, ಕೆ.ಆರ್‌. ಪೇಟೆ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್‌, ಗೋಕಾಕ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ ಕ್ಷೇತ್ರಗಳ ಉಪ ಚುನಾವಣೆ ಮೇಲೂ ಪರಿಣಾಮ ಬೀರುವ ಲಕ್ಷಣಗಳು ಕಂಡುಬರುತ್ತಿವೆ.
ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತಗಳು ಜೆಡಿಎಸ್‌ನತ್ತ ಅಥವಾ ಜೆಡಿಎಸ್‌ ಮತಗಳು ಕಾಂಗ್ರೆಸ್‌ನತ್ತ ವರ್ಗಾವಣೆ ಆಗಲಿವೆ ಎನ್ನಲಾಗಿದೆ. ಹೊಸಕೋಟೆ ಯಲ್ಲಿ ಶರತ್‌ ಬಚ್ಚೇಗೌಡರಿಗೆ ಬೆಂಬಲ ವ್ಯಕ್ತಪಡಿಸಿ ರುವುದರಿಂದ ಬದಲಾವಣೆ ಇಲ್ಲ ಎನ್ನಲಾಗಿದೆ.

ಈ ಮೂಲಕ ಬಿಜೆಪಿಯನ್ನು ಕಟ್ಟಿ ಹಾಕುವುದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಹೇಗಾದರೂ ಮಾಡಿ ಹತ್ತು ಸ್ಥಾನಗಳನ್ನು ಗೆಲ್ಲುವುದು ಮಾಸ್ಟರ್‌ ಪ್ಲ್ರಾನ್‌ ಎನ್ನಲಾಗಿದೆ.

ಡಿಕೆಶಿ ಪ್ರಯತ್ನ?
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮರುಮೈತ್ರಿ ಹಿಂದೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಪ್ರಯತ್ನವಿದ್ದು, ಜೆಡಿಎಸ್‌ ವರಿಷ್ಠ ದೇವೇಗೌಡರ ಜತೆ ಮಾತುಕತೆ ಅನಂತರ ರಾಜ್ಯದ ರಾಜಕೀಯ ಸ್ಥಿತಿಯನ್ನು ಹೈಕಮಾಂಡ್‌ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮತದಾನಕ್ಕೆ ಮುಂಚೆ ಮಾತುಕತೆ ನಡೆದರೆ ಫ‌ಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಚ್‌ಡಿಕೆಗೆ ಬಿಜೆಪಿ ಗಾಳ
ಮತ್ತೂಂದೆಡೆ ಬಿಜೆಪಿ ಕೇಂದ್ರ ನಾಯಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಸಂಪರ್ಕದಲ್ಲಿದ್ದು, ಮೈತ್ರಿ ಅನಿವಾರ್ಯವಾದರೆ ನಮ್ಮ ಜತೆಗಿರಿ ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಸರಕಾರ ಬೀಳದಂತೆ ನೋಡಿಕೊಳ್ಳಲು ಕುಮಾರಸ್ವಾಮಿ ಅವರನ್ನು ಸಂಪರ್ಕಿ ಸಿದ್ದಾರೆ. ಆದರೆ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಪ್ರಸ್ತಾವವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಇದೇ ಕಾರಣಕ್ಕೆ ನನ್ನ ಜತೆ ಯಾರೂ ಮರು ಮೈತ್ರಿ ಬಗ್ಗೆ ಮಾತನಾಡಿಲ್ಲ, ಫ‌ಲಿತಾಂಶದ ಬಳಿಕ ಪರಿಸ್ಥಿತಿ ನೋಡಿ ತೀರ್ಮಾನ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ದೇವೇಗೌಡರು ಮತ್ತು ರೇವಣ್ಣ ಅವರಿಗೆ ಕಾಂಗ್ರೆಸ್‌ ಜತೆ ಮರು ಮೈತ್ರಿಗೆ ಒಲವಿದೆ. ಆದರೆ ಕುಮಾರಸ್ವಾಮಿ ಆಪ್ತರಿಗೆ ಬಿಜೆಪಿ ಜತೆ ಹೋಗಲು ಮನಸ್ಸಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನದ ಸಂದರ್ಭದಲ್ಲೂ ಬಿಜೆಪಿ ಜತೆ ಹೋಗಲು ಕೆಲವು ಶಾಸಕರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದರು. ರಾಜ್ಯದ ಬಿಜೆಪಿ ನಾಯಕರೂ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದರು ಎನ್ನಲಾಗಿದೆ.

ಮಡಿವಂತಿಕೆ ಇಲ್ಲ
ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್‌- ಎನ್‌ಸಿಪಿ ಜತೆಗೂಡಿ ಸರಕಾರ ರಚನೆ ಮಾಡಿ ಬಿಜೆಪಿ ವಿರುದ್ಧ ಒಂದಾಗಿರುವುದು ಕರ್ನಾ ಟಕದಲ್ಲೂ ಮತ್ತೂಂದು ರಾಜಕೀಯ ಧ್ರುವೀಕರಣದ ಚರ್ಚೆಯಾಗು ವಂತಾಗಿದೆ. ರಾಜಕೀಯ ನಿಂತ ನೀರಲ್ಲ, ಬದಲಾವಣೆ ಆಗುತ್ತಲೇ ಇರುತ್ತದೆ. ಜೆಡಿಎಸ್‌ ಬಿಜೆಪಿ ಜತೆ ಹೋಗಬಾರದು ಎಂದೇನಿಲ್ಲ ಅಥವಾ ಯಾಕೆ ಹೋಗಬಾರದು? ರಾಜ್ಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗ ನಮಗೆ ಯಾವುದೇ ಮಡಿವಂತಿಕೆ ಇಲ್ಲ ಎಂದು ಜೆಡಿಎಸ್‌ನ ನಾಯಕರೊಬ್ಬರು ಹೇಳುತ್ತಾರೆ.

ಮೈತ್ರಿ ಹಿರಿಯರದೇ ಆಸಕ್ತಿ
15 ಕ್ಷೇತ್ರಗಳ ಉಪಚುನಾವಣೆ ಸಂಬಂಧ ಸಿದ್ದರಾಮಯ್ಯ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮುನಿಸಿ ಕೊಂಡು ಪ್ರಚಾರದಿಂದ ದೂರವೇ ಉಳಿದಿದ್ದ ಕಾಂಗ್ರೆಸ್‌ನ ಹಿರಿಯರೆಲ್ಲರೂ ಈಗ ದಿಢೀರನೇ ರಂಗಪ್ರವೇಶ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್‌ ಕಡೆಯಿಂದಲೇ ಮೈತ್ರಿ ಬಗ್ಗೆ ಸುಳಿವು ಕಾರಣ ಎನ್ನಲಾಗುತ್ತಿದೆ. ಹೀಗಾಗಿಯೇ ಖರ್ಗೆ, ಡಿಕೆಶಿ, ಪರಮೇಶ್ವರ್‌, ಮುನಿಯಪ್ಪ, ಮೊಲಿ, ಬಿ.ಕೆ. ಹರಿಪ್ರಸಾದ್‌ರಂಥ ನಾಯಕರು ಪ್ರಚಾರ ಕಣದಲ್ಲಿದ್ದಾರೆ. ಇವರಲ್ಲಿ ಬಹುತೇಕರು ಈಗಾಗಲೇ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ.

ಟಾರ್ಗೆಟ್‌ 10
ಸದ್ಯ 15 ಕ್ಷೇತ್ರಗಳಿಗೆ ಉಪಚುನಾ ವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಕಡೇ ಪಕ್ಷ 10ರಲ್ಲಾದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾದರೆ?
-ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್‌ಗೆ ಮತ್ತು ಡಿಸಿಎಂ ಜೆಡಿಎಸ್‌ಗೆ ಎಂಬ ಒಪ್ಪಂದ ಆಗಬಹುದು.
-ಸಿದ್ದರಾಮಯ್ಯ ಸಿಎಂ ಆಗದಂತೆ ದೇವೇಗೌಡ ಷರತ್ತು ಹಾಕಬಹುದು
-ಖರ್ಗೆ ಎಂದೋ ಮುಖ್ಯ ಮಂತ್ರಿ  ಯಾಗ  ಬೇಕಿತ್ತು ಎಂದು ಪ್ರತಿಪಾದಿಸಿರುವ ದೇವೇ ಗೌಡರು, ಆ ಆಯ್ಕೆಯತ್ತ ಗಮನ ನೀಡಬಹುದು.
-ಡಿ.ಕೆ. ಶಿವಕುಮಾರ್‌, ಡಾ| ಜಿ. ಪರಮೇಶ್ವರ್‌, ಎಂ.ಬಿ. ಪಾಟೀಲ್‌, ಎಚ್‌.ಕೆ. ಪಾಟೀಲ್‌ ಹೆಸರು ಮುಂಚೂಣಿಗೆ ಬರಬಹುದು.

ಬಿಜೆಪಿ-ಜೆಡಿಎಸ್‌ ಮೈತ್ರಿಯಾದರೆ?
-ಒಂದು ವೇಳೆ ಮುಖ್ಯಮಂತ್ರಿ ಸ್ಥಾನ
ಜೆಡಿಎಸ್‌ಗೆ ಸಿಕ್ಕರೆ ಮತ್ತೆ ಕುಮಾರಸ್ವಾಮಿ ಸಿಎಂ ಆಗಬಹುದು.
-ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಎಂದಾದರೆ ಬಿ.ಎಲ್‌. ಸಂತೋಷ್‌ ಹೆಸರು ಮುಂಚೂಣಿಗೆ ಬರಬಹುದು.
-ಆಗ ಡಿಸಿಎಂ ಸ್ಥಾನಕ್ಕೆ ರೇವಣ್ಣ, ಅನಿತಾ ಕುಮಾರ ಸ್ವಾಮಿ ಹೆಸರು ಪ್ರಸ್ತಾವವಾಗಬಹುದು.
-ಅಂಥ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಬಿಜೆಪಿಯು ಕೇಂದ್ರಕ್ಕೆ ಕರೆಯಿಸಿಕೊಳ್ಳಬಹುದು.

ಉಪಚುನಾವಣೆ ಫಲಿತಾಂಶದ ಅನಂತರ ರಾಜ್ಯದ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಜೆಡಿಎಸ್‌ ಮತ್ತೆ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ರಾಜ್ಯದಲ್ಲಿ ಮತ್ತೆ ಮೈತ್ರಿ ಸರಕಾರ ರಚನೆಯಾಗಲಿದೆ ಎಂಬುದು ಶುದ್ಧ ಸುಳ್ಳು. ಜನ ಬಿಜೆಪಿ ಪರವಾಗಿದ್ದಾರೆ. 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಫ‌ಲಿತಾಂಶದ ಬಳಿಕ ಕಾಂಗ್ರೆಸ್‌, ಜೆಡಿಎಸ್‌ಗೆ ಪರಿಸ್ಥಿತಿಯ ಅರಿವಾಗುತ್ತದೆ.
– ಯಡಿಯೂರಪ್ಪ, ಮುಖ್ಯಮಂತ್ರಿ

Comments are closed.