ಬೆಂಗಳೂರು(ಡಿ. 2): ರಾಜ್ಯದ ಪ್ರಭಾವಿ ರಾಜಕಾರಣಿಗಳನ್ನು ಹನಿಟ್ರ್ಯಾಪ್ಗೆ ಸಿಲುಕಿಸಿರುವ ಪ್ರಕರಣಗಳು ಇನ್ನೂ ಸದ್ದು ಮಾಡುತ್ತಲೇ ಇವೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ರಾಘವೇಂದ್ರರ ವಿಚಾರಣೆಯನ್ನು ಸಿಸಿಬಿ ಪೊಲೀಸರು ಅವಸರದಲ್ಲೇ ಅಂತ್ಯಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ. ಈ ಬೆನ್ನಲ್ಲೀಗ ಮತ್ತಷ್ಟು ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳು ಬಯಲಿಗೆ ಬರುತ್ತಿವೆ.
ಹಲವು ಜನಪ್ರತಿನಿಧಿಗಳು ಸಿಲುಕಿರುವ ಹನಿಟ್ರ್ಯಾಪ್ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರೋಪಿಯ ವಿಚಾರಣೆ ನಡೆಸಲು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಎರಡೇ ದಿನಕ್ಕೆ ವಿಚಾರಣೆ ಅಂತ್ಯಗೊಳಿಸಿದ್ಧಾರೆ. ಅವಧಿಗೆ ಮುನ್ನವೇ ರಾಘವೇಂದ್ರನನ್ನು ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಆತನನ್ನು ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಈ ಮಧ್ಯೆ ಪೊಲೀಸರಿಂದ ಹನಿಟ್ರ್ಯಾಪ್ಗೆ ಸಂಬಂಧಿಸಿದ ವಿಡಿಯೋ, ಆಡಿಯೊ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೀಗ, ಕೆಲ ಆಡಿಯೋ ವಿಡಿಯೋಗಳು ಹೊರಗೆ ಸೋರಿಕೆಯಾಗುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.
ಇಬ್ಬರು ಅನರ್ಹ ಶಾಸಕರು, ಒಬ್ಬ ಬಿಜೆಪಿ ಶಾಸಕ ಸೇರಿದಂತೆ 10 ಶಾಸಕರು ಕಿಂಗ್ಪಿನ್ ರಾಘವೇಂದ್ರನ ಹನಿಟ್ರ್ಯಾಪ್ಗೆ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಈ ಹತ್ತು ಶಾಸಕರಷ್ಟೇ ಅಲ್ಲ ವಿವಿಧ ಪಕ್ಷಗಳ ಇನ್ನೂ ಹಲವು ರಾಜಕಾರಣಿಗಳನ್ನು ಹನಿಟ್ರ್ಯಾಪ್ಗೆ ಕೆಡವಲಾಗಿದೆ. ಹನಿಟ್ರ್ಯಾಪ್ಗೆ ಒಳಪಡಿಸಿ ರೆಕಾರ್ಡ್ ಮಾಡಲಾದ ಅಶ್ಲೀಲ ವಿಡಿಯೋವನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು. ಸಿಸಿಬಿ ಪೊಲೀಸರು ಪ್ರಕರಣದ ಮಾಸ್ಟರ್ಮೈಂಡ್ ರಾಘವೇಂದ್ರ ಅಲಿಯಾಸ್ ರಘು ಅಲಿಯಾಸ್ ರಾಕಿಯನ್ನು ಹಣ ಕೊಡುವ ನೆಪದಲ್ಲಿ ಕರೆಸಿ ಬಂಧಿಸಿದ್ದಾರೆ. ರಾಘವೇಂದ್ರನ ಪ್ರೇಯಸಿ ಪುಷ್ಪಾ ಹಾಗೂ ಇತರ ಎಂಟತ್ತು ಮಂದಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ಧಾರೆ.
ನ್ಯೂಸ್-18ಗೆ ಲಭ್ಯವಾಗಿರುವ ಮೂಲಗಳ ಪ್ರಕಾರ, ಚಿತ್ರದುರ್ಗ ಮೂಲದ ಇಬ್ಬರು ಶಾಸಕರು, ಮೈಸೂರಿನ ಜೆಡಿಎಸ್ನ ಓರ್ವ ಶಾಸಕ, ಉಡುಪಿಯ ಬಿಜೆಪಿ ಮತ್ತೋರ್ವ ಶಾಸಕ, ಬೆಳಗಾವಿಯ ಪ್ರಭಾವಿ ಅನರ್ಹ ಶಾಸಕ ಸೇರಿದಂತೆ ರಾಯಚೂರಿನ ಇನ್ನೊಬ್ಬ ಅನರ್ಹ ಶಾಸಕರು ಹನಿಟ್ರ್ಯಾಪ್ಗೆ ಸಿಲುಕಿದ್ಧಾರೆನ್ನಲಾಗಿದೆ. ಕಾಂಗ್ರೆಸ್ನ ಪ್ರಭಾವಿ ನಾಯಕನೋರ್ವ ಕಿಂಗ್ಪಿನ್ ರಾಘವೇಂದ್ರ ಅವರನ್ನು ಒಮ್ಮೆ ಭೇಟಿಯಾಗಿದ್ದರಂತೆ. ಆಗ ಈ ಮೇಲಿನವರ ಹೆಸರು ಬಯಲಿಗೆ ಬಂದಿದೆ ಎಂದು ನ್ಯೂಸ್-18 ಕನ್ನಡಕ್ಕೆ ತಿಳಿದು ಬಂದಿದೆ.
Comments are closed.