ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯದ ಒಂದು ಮತವೂ ಬೇರೆ ಪಕ್ಷಕ್ಕೆ ಹೋಗಬಾರದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ, ಚುನಾವಣಾ ಆಯೋಗ ಕೊನೆಗೂ ಎಫ್‌ಐಆರ್ ದಾಖಲಿಸಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಮುಖ್ಯಮಂತ್ರಿಯವರ ಹೇಳಿಕೆಗೆ ಸಂಬಂಧಪಟ್ಟಂತೆ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗೆ ಕೂಲಂಕಷ ವಿಶ್ಲೇಷಣೆ ನಡೆಸಿದ ಬಳಿಕ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ‘ಸರಕಾರ ಸ್ಥಿರವಾಗಿರಬೇಕಿದ್ದರೆ, ವೀರಶೈವ-ಲಿಂಗಾಯತ ಸಮುದಾಯದ ಒಂದೇ ಒಂದು ಮತವೂ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಬಾರದು’ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್, ಜೆಡಿಎಸ್ ದೂರು ಸಲ್ಲಿಸಿತ್ತು.
ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ಗೆಲ್ಲಿಸಿದರೆ ಮರುದಿನವೇ ಅವರನ್ನು ಮಂತ್ರಿಯಾಗಿ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವ್ಯಾಪ್ತಿಗೆ ಬರುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜೀವ್ ಕುಮಾರ್, ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷ ಗೆದ್ದರೆ ಇಂಥವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಕೆ ನೀಡಲಾಗುತ್ತದೆ. ಅದೇ ರೀತಿ ಗೆದ್ದರೆ ಮಂತ್ರಿ ಮಾಡುತ್ತೇವೆ ಎಂಬುದು ಚುನಾವಣಾ ಸಂಪ್ರದಾಯ. ಹಿಂದಿನಿಂದಲೂ ಇಂಥ ಹೇಳಿಕೆಗಳು ಇದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದರು.
ನವೆಂಬರ್ 24ರಂದು ಬೆಳಗಾವಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ, ವೀರಶೈವ ಸಮಾಜದವರು ಯಾವುದೇ ಕಾರಣಕ್ಕೂ ನಮ್ಮ ಕೈ ಬಿಡಲ್ಲ ಎಂದಿದ್ದರು. 15 ಜನರನ್ನೂ ವೀರಶೈವ ಸಮುದಾಯವರು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಸಿಎಂ ಹೇಳಿಕೆ ವಿರುದ್ಧ ನವೆಂಬರ್ 25ರಂದು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿತ್ತು.
Comments are closed.