ಕರ್ನಾಟಕ

ಚಲಿಸುತ್ತಿದ ಸರಕಾರಿ ಬಸ್ ನಲ್ಲಿ ಗರ್ಭಿಣಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ

Pinterest LinkedIn Tumblr

ಯಾದಗಿರಿ: ಚಲಿಸುತ್ತಿದ ಸರಕಾರಿ ಬಸ್ ನಲ್ಲಿಯೇ ಗರ್ಭಿಣಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಶಹಾಪುರ ತಾಲೂಕಿನ ಟೋಕಾಪುರ ಗ್ರಾಮದ ನಿವಾಸಿ ಶಶಿಕಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಯಾದಗಿರಿಯಿಂದ ಶಹಾಪುರದ ಕಡೆ ತೆರಳುತಿದ್ದ ಸರಕಾರಿ ಬಸ್ ನಲ್ಲಿಯೇ ಬೆಂಡಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕರ್ತವ್ಯ ನಿಮಿತ್ತ ಇಂದು ಬೆಳಿಗ್ಗೆ ಬಸ್ ನಲ್ಲಿ ಶಹಾಪುರ ಕಡೆ ತೆರಳುತ್ತಿದ್ದರು. ಈ ವೇಳೆ ತುಂಬು ಗರ್ಭಿಣಿ ಶಶಿಕಲಾಗೆ ಬಸ್ ನಲ್ಲಿ ಹೆರಿಗೆ ನೋವು ಕಾಣಿಸಿತ್ತು ಇದನ್ನು ಅರಿತ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೂಡಲೇ ಬಸ್ ನಲ್ಲೇ ಹೆರಿಗೆ ಮಾಡಿಸಿದ್ದಾರೆ.

ಶಹಾಪುರ ತಾಲೂಕಿನ ಟೋಕಾಪುರ ಗ್ರಾಮದ ನಿವಾಸಿ ಶಶಿಕಲಾ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಮೂರನೇ ಹೆರಿಗಾಗಿ ಬೆಂಗಳೂರನಿಂದ 8 ದಿನಗಳ ಹಿಂದೆ ಯಾದಗಿರಿ ನಗರಕ್ಕೆ ಆಗಮಿಸಿ ನಗರದಲ್ಲಿರುವ ಸಹೋದರಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇಂದು ನಸುಕಿನ ಜಾವ ಶಶಿಕಲಾಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ದಾಖಲಾದ 3 ಗಂಟೆಯೊಳಗೆ ಹೆರಿಗೆಯಾಗುತ್ತದೆ ಎಂದು ಸೂಚನೆ ನೀಡಿದರು. ಆದರೆ ಶಶಿಕಲಾ ಕುಟುಂಬಸ್ಥರು ಸರಕಾರಿ ಆಸ್ಪತ್ರೆ ಬದಲು ಹೆರಿಗೆಗಾಗಿ ಶಹಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಗರ್ಭಿಣಿಯನ್ನು ಯಾದಗಿರಿಯಿಂದ ಶಹಾಪುರಗೆ ಬಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಹೆಚ್ಚಿನ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನು ಅರಿತ ಆರೋಗ್ಯ ಸಿಬ್ಬಂದಿಗಳು ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಶಹಾಪುರ‌ ಸಮೀಪದ ದೋರನಹಳ್ಳಿ ಬಳಿ ಬಸ್ ನಲ್ಲಿ ಶಶಿಕಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಬಸ್ ಸಹಿತ ತಾಯಿ ಹಾಗೂ ಹೆಣ್ಣು ಮಗುವನ್ನು ಬಸ್ ನಲ್ಲಿಯೇ ಶಹಾಪುರ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ

ತಾಲೂಕಾ ಆರೋಗ್ಯ ಅಧಿಕಾರಿ ರಮೇಶ ಗುತ್ತೇದಾರ ಹಾಗೂ ವೈದ್ಯರ ತಂಡ ಕೂಡಲೇ ತಾಯಿ ಹಾಗೂ ಮಗುವಿನ ಆರೋಗ್ಯ ತಪಾಸಣೆ ಮಾಡಿದ್ದು ಚಿಕಿತ್ಸೆ ಮುಂದುವರೆದಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳ ಹಾಗೂ ಬಸ್ ನ ಚಾಲಕ , ನಿರ್ವಾಹಕರ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Comments are closed.