ಬೆಂಗಳೂರು : ಕೆಪಿಎಲ್ ಫೈನಲ್ ಪಂದ್ಯದಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಬೆಳಗಾವಿ ಫ್ಯಾಂಥರ್ಸ್ ತಂಡದ ಕೋಚ್ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಬೆಳಗಾವಿ ಫ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆಯನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಸೋಮವಾರ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಶಿಂಧೆ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಬಂಧಿತರು ವಿಚಾರಣೆ ವೇಳೆ ಬೆಳಗಾವಿ ಫ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆ ಹೆಸರು ಹೇಳಿದ್ದರು. ಆದ್ದರಿಂದ, ಅವರ ನಿವಾಸದ ಮೇಲೆ ಸಿಸಿಬಿ ದಾಳಿ ಮಾಡಿತ್ತು.
ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಕ್ ತಾರ್‌ರನ್ನು ಹಿಂದೆಯೇ ಸಿಸಿಬಿ ಬಂಧಿಸಿತ್ತು. ಮ್ಯಾಚ್ ಫಿಕ್ಸಿಂಗ್ ಮಾಡಲು ಸುಧೀಂದ್ರ ಶಿಂಧೆ ಸಹಾಯ ಮಾಡಿದ್ದಾರೆ ಎಂಬ ಮಾಹಿತಿಯನ್ನು ಅವರು ನೀಡಿದ್ದರು. ಸುಧೀಂದ್ರ ಶಿಂಧೆಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುತ್ತದೆ.
ಸುಧೀಂದ್ರ ಶಿಂಧೆ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರು ಹೌದು. ಆಟಗಾರರ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರಕರಣದಲ್ಲಿ ಶಿಂಧೆ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳಲು ಸಿಸಿಬಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
Comments are closed.