ಬೆಂಗಳೂರು: ಇಂದು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾರ 28ನೇ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ಅಂಬಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸುಮಲತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಅಂಬರೀಶ್ ಮತ್ತು ಸುಮಲತಾ ಅವರು 1991ರ ಡಿಸೆಂಬರ್ 8 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಇವರಿಬ್ಬರು ಮದುವೆಯಾಗಿ 28 ವರ್ಷಗಳು ಕಳೆದಿದೆ. ಆದರೆ ಇಂದು ಸುಮಲತಾ ಅಗಲಿದ ಅಂಬಿ ಅವರ ನೆನಪಿನಲ್ಲಿದ್ದಾರೆ. ಹೀಗಾಗಿ ಸಂಸದೆ ಸುಮಲತಾ ಟ್ವೀಟ್ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯವನ್ನು ಕೋರಿದ್ದಾರೆ.
“1991ರ ಡಿಸೆಂಬರ್ 8 ರಂದು ವಿವಾಹವಾಗಿದ್ದು, ಇಂದಿಗೆ 28 ವರ್ಷಗಳು ಆಗಿದೆ. ಇಷ್ಟು ವರ್ಷಗಳಲ್ಲಿ, ಹಂಚಿಕೆಯ, ಕಾಳಜಿಯ, ನಗುವ, ಅಳುವ, ಕಾಣೆಯಾಗುವ, ಹುಡುಕುವ, ಕತ್ತಲೆಯ, ಬೆಳಕಿನ, ಹತಾಶೆ, ಸಂತೋಷ, ಪ್ರೀತಿಯಿಂದ ಪ್ರೀತಿ ಇವೆಲ್ಲವೂ 28 ವರ್ಷಗಳೂ ಜೊತೆಯಾಗಿಯೇ ಇದ್ದವು. ಇವು ಯಾವಾಗಲೂ ಶಾಶ್ವತವಾಗಿ ಇರುತ್ತವೆ. ಸದಾ ನಿಮ್ಮನ್ನು ಪ್ರೀತಿಸುವೆ” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ “ನಮ್ಮ 28ನೇ ವಿವಾಹ ವಾರ್ಷಿಕೋತ್ಸವ. ಈ ನೆನಪು ಒಂದು ಸ್ಮೈಲ್ ತರುತ್ತವೆ” ಎಂದು ಬರೆದುಕೊಂಡು ತಾವಿಬ್ಬರೂ ಅಭಿನಯಿಸಿದ್ದ ‘ತಾಯಿಗೊಬ್ಬ ಕರ್ಣ’ ಸಿನಿಮಾದ ರೊಮ್ಯಾಂಟಿಕ್ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ವಿವಾಹ ವಾರ್ಷಿಕೋತ್ಸವಕ್ಕೆಂದು ಒಂದು ಅಪರೂಪದ ವಿಡಿಯೋ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸುಮಲತಾ ಮತ್ತು ಅಂಬರೀಶ್ ಪೋಟೋಗಳು ಮತ್ತು ಒಟ್ಟಿಗೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ.
Comments are closed.