ಬೆಂಗಳೂರು: ರಾಜ್ಯದಲ್ಲಿ ನಡೆದ ಉಪಚುನಾವಣೆಯ 15 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ದೊಡ್ಡಮಟ್ಟದ ಅಂತರದಿಂದ ಗೆಲುವು ದೊರೆತಿದ್ದು, ಗೆಲುವು ಸಾಧಿಸಿರುವ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಮತ್ತೊಮ್ಮೆ ಅಭಯ ನೀಡಿದ್ದಾರೆ.
ಫಲಿತಾಂಶದ ಬಳಿಕ ನಗರದ ತಮ್ಮ ಧವಳಗಿರಿ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಚಿವರು, ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಈ ಗೆಲುವು ಸಾಧಿಸಿದೆ. ಸರ್ಕಾರದ ಅಸ್ಥಿರತೆ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕರು ನಮಗೆ ಇನ್ನಾದರೂ ನಮಗೆ ಸಹಕಾರ ಕೊಡಬೇಕು ಎಂದು ಕೋರಿದರು.
ಗೆಲುವಿನ ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಕುಟುಕಿದ ಯಡಿಯೂರಪ್ಪ, ಚುನಾವಣೆ ಫಲಿತಾಂಶ ಬಂದಿದೆ. ಇನ್ನೇನಿದ್ದರೂ ತಮ್ಮ ಗಮನ ರಾಜ್ಯದ ಅಭಿವೃದ್ಧಿ ಕಡೆಗೆ. ಮುಂದಿನ ಚುನಾವಣೆಯಲ್ಲಿ 150 ಕ್ಚೇತ್ರಗಳಲ್ಲಿ ಗೆದ್ದು, ಬಿಜೆಪಿಯ ವರಿಷ್ಠರಿಗೆ ಕೊಡುಗೆ ನೀಡುತ್ತೇವೆ. ಈ ಉಪಫಲಿತಾಂಶ ವರಿಷ್ಠ ನಾಯಕರಿಗೆ ಸಮಾಧಾನ ತಂದಿದೆ ಎಂದರು.
ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳುತ್ತಿದ್ದು, ಮಂತ್ರಿಮಂಡಲ ವಿಸ್ತರಣೆ, ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಹಿರಿಯ ನಾಯಕರೊಂದಿಗೆ ಚರ್ಚಿಸುತ್ತೇನೆ. ತಾವು ಮಾತು ನೀಡಿದವರನ್ನು ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಮಂಡ್ಯದ. ಕೆಆರ್ ಪೇಟೆಯ ಗೆಲುವು ತಮಗೆ ಬಹಳ ತೃಪ್ತಿ ತಂದಿದೆ. ಸಂಸದ ಬಚ್ಚೇಗೌಡರ ಬಗ್ಗೆ ಈಗಾಗಲೇ ಈ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಸೋತ ಅಭ್ಯರ್ಥಿಗಳಿಗೆ ಯಾವ ರೀತಿ ಅಧಿಕಾರ ಕೊಡಬೇಕು ಎಂಬ ಬಗ್ಗೆ ಮಾಧ್ಯಮಗಳ ಜೊತೆ ಜೊತೆ ಚರ್ಚೆ ಮಾಡುವುದಿಲ್ಲ. ಈ ವಿಚಾರದಲ್ಲಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
Comments are closed.