ಕರ್ನಾಟಕ

ಮೊಬೈಲ್‌ ನಂಬರ್‌, ಐಡಿ ಕೊಡದಿದ್ದರೆ ವಸ್ತು ಸಿಗಲ್ಲ

Pinterest LinkedIn Tumblr


ಬೆಂಗಳೂರು: ಮೊಬೈಲ್‌ ನಂಬರ್‌ ಅಥವಾ ಇ-ಮೇಲ್‌ ಐಡಿಗಳನ್ನು ನೀಡದ ಗ್ರಾಹಕರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡದ ಫ್ರಾನ್ಸ್‌ ಮೂಲದ ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆ ಡೆಕಾಥ್ಲಾನ್‌ನ ನಿಲುವು ಸಾಮಾಜಿಕ ತಾಣದಲ್ಲಿವಿವಾದಕ್ಕೆ ಕಾರಣವಾಗಿದೆ.

‘ನಿಮ್ಮ ಮೊಬೈಲ್‌ ನಂಬರ್‌ಗಳನ್ನು ವ್ಯಾಪಾರಿ ಮಾಲ್‌ಗಳಿಗೆ ನೀಡಬೇಡಿ. ಅವು ದತ್ತಾಂಶವಾಗಿ ಮಾರಾಟ ಆಗುತ್ತವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಅವರು ಕೆಲ ದಿನಗಳ ಹಿಂದೆ ಮಾಡಿದ್ದ ಟ್ವೀಟ್‌ ಬೆನ್ನಲ್ಲೇ ಡೆಕಾಥ್ಲಾನ್‌ ನಡೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ಅವರು ಮೊದಲು ಡೆಕಾಥ್ಲಾನ್‌ ಈ ನಡವಳಿಕೆ ಬಗ್ಗೆ ಗಮನ ಸೆಳೆದಿದ್ದರು. ಗ್ರಾಹಕರ ಮೊಬೈಲ್‌ ಮತ್ತು ಇ ಮೇಲ್‌ ಐಡಿಯನ್ನು ಡೆಕಾಥ್ಲಾನ್‌ ದಾಖಲಿಸಿಕೊಳ್ಳುತ್ತಿರುವುದರ ಬಗ್ಗೆ ರಾಜ್ಯ ಗ್ರಾಹಕ ವ್ಯವಹಾರಗಳ ಇಲಾಖೆ, ಬಿಬಿಎಂಪಿ ಗಮನಕ್ಕೆ ತಂದಿದ್ದರು. ಬಳಿಕ ಡೆಕಾಥ್ಲಾನ್‌, ಮಣಿವಣ್ಣನ್‌ ಅವರಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿ, ಸಂಪರ್ಕ ವಿವರಗಳನ್ನು ಸಂಗ್ರಹಿಸುವುದನ್ನು ಸಮರ್ಥಿಸಿಕೊಂಡಿತ್ತು ಮತ್ತು ಅದಕ್ಕೆ ಕಾರಣಗಳನ್ನೂ ನೀಡಿತ್ತು.

ಏನು ಸಮರ್ಥನೆ?: ಗ್ರಾಹಕ ನ್ಯಾಯಾಲಯದ ಕೆಲವು ತೀರ್ಪುಗಳು ಮತ್ತು ‘ಭಾರತೀಯ ಕರಾರು ಕಾಯ್ದೆ 1872’ರ ನಿಯಮಗಳಡಿಯಲ್ಲೇ ಸಂಪರ್ಕ ವಿವರ ಸಂಗ್ರಹಿಸುತ್ತೇವೆ. ಸಂಪರ್ಕ ವಿವರಗಳನ್ನು ನೀಡದವರಿಗೆ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ. ಮಾರಾಟಗೊಂಡ ವಸ್ತುವಿನ ಗುಣಮಟ್ಟ ಹಾಗೂ ಗ್ರಾಹಕರು ವಸ್ತುಗಳನ್ನು ಹಿಂದಿರುಗಿಸಲು ಬಯಲಿಸುವುದೂ ಸೇರಿದಂತೆ ಇನ್ನಿತರೆ ಗ್ರಾಹಕರ ಅನುಕೂಲಕ್ಕಾಗಿಯೇ ಬಳಸಲಾಗುತ್ತದೆ ಎಂದು ಡೆಕಥ್ಲಾನ್‌ ಹೇಳಿತ್ತು.

ಖಾಸಗಿ ತನಕ್ಕೆ ಧಕ್ಕೆ: ಡೆಕಾಥ್ಲಾನ್‌ನ ವಿವರಣೆ, ಸಮರ್ಥನೆಯನ್ನು ಅಧಿಕಾರಿ ಮಣಿವಣ್ಣನ್‌ ಮತ್ತು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದ ಪ್ರಾಧ್ಯಾಪಕ ಅಶೋಕ್‌ ಆರ್‌. ಪಾಟೀಲ್‌ ತಳ್ಳಿ ಹಾಕಿದ್ದು, ”ಇದು ಗ್ರಾಹಕರ ಖಾಸಗಿತನಕ್ಕೆ ಧಕ್ಕೆ ತರುತ್ತದೆ,” ಎಂದು ತಿಳಿಸಿದ್ದಾರೆ.

ಕಮಿಷನರ್‌ ಟ್ವೀಟ್‌ನಲ್ಲೇನಿತ್ತು?
ವ್ಯಾಪಾರಿ ಮಳಿಗೆ ಮತ್ತು ಮಾಲ್‌ಗಳಲ್ಲಿನಿಮ್ಮ ಮೊಬೈಲ್‌ ನಂಬರ್‌ಗಳನ್ನು ನೀಡಬೇಡಿ. ಅವರ ಕೇಳಿದರೂ ಕೊಡಲು ನಿರಾಕರಿಸಿ. ನಿಮ್ಮ ಮೊಬೈಲ್‌ ನಂಬರ್‌ಗಳು ದತ್ತಾಂಶವಾಗಿ ಮಾರಾಟ ಆಗುತ್ತವೆ. ಸೈಬರ್‌ ಖದೀಮರಿಗೆ ನೀವಾಗೇ ನಿಮ್ಮ ಬಾಗಿಲು ತೆರೆದಂತೆ ಎಂದು ನಗರ ಪೊಲೀಸ್‌ ಭಾಸ್ಕರ ರಾವ್‌ ಟ್ವೀಟ್‌ ಮಾಡಿದ್ದರು.

ಪರಿಣತರು ಹೇಳುವುದೇನು?
”ಸಂಪರ್ಕ ವಿವರಗಳನ್ನು ನೀಡದ ಗ್ರಾಹಕರಿಗೆ ತನ್ನ ವಸ್ತುಗಳನ್ನು ಮಾರಾಟ ಮಾಡುವುದಿಲ್ಲಎನ್ನುವುದು ‘ಗ್ರಾಹಕ ಸಂರಕ್ಷಣಾ ಕಾಯ್ದೆ 1986’ ಅಡಿಯಲ್ಲಿ ತಪ್ಪಾಗುತ್ತದೆ. ಇದು ಕಾನೂನಿನ ಪ್ರಕಾರ ನಿರ್ಬಂಧಿತ ವ್ಯಾಪಾರ ಅನ್ನಿಸಿಕೊಳ್ಳುತ್ತದೆ. ಇದುವರೆಗೂ ಯಾವ ಗ್ರಾಹಕ ನ್ಯಾಯಾಲಯ ಕೂಡ ಗ್ರಾಹಕರ ಸಂಪರ್ಕ ವಿವರಗಳನ್ನು ಸಂಗ್ರಹಿಸದಿರುವುದು ತಪ್ಪು ಎಂದು ಹೇಳಿಲ್ಲ. ಇದಕ್ಕಾಗಿ ಯಾವ ವ್ಯಾಪಾರಿಯನ್ನೂ ಹೊಣೆ ಮಾಡಿಲ್ಲ. ಕೆಲವು ವ್ಯಾಪಾರಿ ಮಳಿಗೆಗಳು ಗ್ರಾಹಕರ ಸಂಪರ್ಕ ವಿವರಗಳಿಗೆ ತಮ್ಮ ಜಾಹೀರಾತನ್ನು ಕಳುಹಿಸುವ ಮೂಲಕ ಗ್ರಾಹಕರ ಖಾಸಗಿತನಕ್ಕೆ ಧಕ್ಕೆ ತಂದಿವೆ,” ಎಂದು ಗ್ರಾಹಕ ಕಾನೂನು ಪರಿಣತ ಹಾಗೂ ಪ್ರಾಧ್ಯಾಪಕ ಅಶೋಕ್‌ ಆರ್‌ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಮಣಿವಣ್ಣನ್‌ ಹೇಳುವುದೇನು?
ವಾರ್ತಾ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ಅವರು, ”ಡೆಕಾಥ್ಲಾನ್‌ ಭಾರತೀಯ ಕರಾರು ಕಾಯ್ದೆ 1872 ಅನ್ನು ತನ್ನ ಸಮರ್ಥನೆಗೆ ಬಳಸಿಕೊಂಡಿದೆ. ಆದರೆ ನನಗೆ ಗೊತ್ತಿರುವ ಪ್ರಕಾರ ಈ ಕಾಯ್ದೆಯಲ್ಲಿಆ ರೀತಿಯ ನಿಯಮಗಳಿಲ್ಲ. ಗ್ರಾಹಕರು ಕಂಪನಿ ಜತೆಗೆ ಆ ರೀತಿ ಒಂದು ಒಪ್ಪಂದ ಮಾಡಿಕೊಳ್ಳದ ಸಂದರ್ಭದಲ್ಲಿನಮ್ಮ ಮೊಬೈಲ್‌ ನಂಬರ್‌ ಕೇಳುವಂತಿಲ್ಲ. ಇದಕ್ಕೆ ಬಿಬಿಎಂಪಿ ಹೇಗೆ ಅನುಮತಿ ನೀಡಿದೆ?” ಎಂದು ಪ್ರಶ್ನಿಸಿದ್ದಾರೆ.

ಡೆಕಾಥ್ಲಾನ್‌ ಸಮರ್ಥನೆ ಏನು?
– ಗ್ರಾಹಕರು ಖರೀದಿಸಿದ ವಸ್ತುವಿನ ಗುಣಮಟ್ಟದಲ್ಲಿವ್ಯತ್ಯಾಸವಿದ್ದರೆ ಅವರು ಅದನ್ನು ಹಿಂದಿರುಗಿಸಲು ಬಯಸಿದಲ್ಲಿ ಆ ಬಗ್ಗೆ ವ್ಯವಹರಿಸಲು ಅನುಕೂಲ.
– ಖರೀದಿಸಿದ ವಸ್ತುಗಳನ್ನು ಹಿಂದಿರುಗಿಸಲು ಅಥವಾ ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಸುಲಭ ಮಾಡಿಕೊಳ್ಳಲು.
– ಡೆಕಥ್ಲಾನ್‌ ಹಮ್ಮಿಕೊಳ್ಳುವ ಕೆಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು.
– ಬಿಲ್‌ ಸಂದರ್ಭದಲ್ಲಿಗ್ರಾಹಕರಿಗೆ ಮಾಹಿತಿ ನೀಡಲು ಎಸ್‌ಎಂಎಸ್‌ ಅಥವಾ ಇ-ಮೇಲ್‌ ಅನುಕೂಲವೇ ಎಂದು ಕೇಳಲಾಗುತ್ತದೆ ಮತ್ತು ಆಯ್ಕೆ ಸ್ವಾತಂತ್ರ್ಯವನ್ನು ಅವರಿಗೇ ನೀಡಲಾಗುತ್ತದೆ.

Comments are closed.