ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆಯನ್ನು ಹೇರಿದ್ದರೂ ನಗರ ಟೌನ್ ಹಾಲ್ ಬಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು.
ಈ ಸಂದರ್ಭದಲ್ಲಿ ನಗರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಅವರು ತೋರಿದ ವರ್ತನೆ ಇದೀಗ ಸಾರ್ವಜನಿಕವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಪ್ರತಿಭಟನಾ ಸ್ಥಳದಿಂದ ತೆರಳುವಂತೆ ಚೇತನ್ ಅವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆದರೆ ಡಿಸಿಪಿ ಮನವಿಗೆ ಪ್ರತಿಭಟನಾಕಾರರು ಕಿವಿಗೊಡದಿದ್ದಾಗ ಅವರ ಉದ್ದೇಶಿಸಿ ಮಾತನಾಡಿದ ಡಿಸಿಪಿ ಚೇತನ್ ಅವರು, ‘ಹಿಂಸೆಯನ್ನು ಸೃಷ್ಟಿಮಾಡುವವರು ನಮ್ಮ-ನಿಮ್ಮ ನಡುವೆಯೇ ಇದ್ದಾರೆ. ಹಿಂಸೆ ನಮ್ಮ ಗುರಿಯಾಗಬಾರದು. ನಾನೂ ನಿಮ್ಮಲ್ಲೊಬ್ಬ ಎಂದು ನಿಮಗನಿಸುತ್ತಿದ್ದರೆ ನಾನು ಹೇಳುವ ಈ ಹಾಡಿಗೆ ನನ್ನೊಂದಿಗೆ ಧ್ವನಿಗೂಡಿಸಿ’ ಎಂದು ಹೇಳಿ ರಾಷ್ಟ್ರಗೀತೆಯನ್ನು ಹಾಡುತ್ತಾರೆ.
ಈ ಸಂದರ್ಭದಲ್ಲಿ ಪ್ರತಿಭಟನಕಾರರೂ ಸಹ ಡಿಸಿಪಿ ಜೊತೆಯಲ್ಲಿ ರಾಷ್ಟ್ರಗೀತೆಗೆ ಧ್ವನಿಸೇರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರತಿಭಟನಕಾರರೂ ಸಹ ಡಿಸಿಪಿ ಜೊತೆಯಲ್ಲಿ ರಾಷ್ಟ್ರಗೀತೆಗೆ ಧ್ವನಿ ಸೇರಿಸುತ್ತಾರೆ. ಮತ್ತು ರಾಷ್ಟ್ರಗೀತೆ ಮುಗಿದ ಬಳಿಕ ಪ್ರತಿಭಟನಕಾರರು ಶಾಂತಸ್ಥಿತಿಯಿಂದ ಅಲ್ಲಿಂದ ತೆರಳುತ್ತಾರೆ.
ಡಿಸಿಪಿ ಚೇತನ್ ಅವರು ಅಂತಹ ಬಿಗುವಿನ ಪರಿಸ್ಥಿತಿಯಲ್ಲೂ ಪ್ರತಿಭಟನಕಾರರ ಮನ ಒಲಿಸುವಂತಹ ಕಾರ್ಯಕ್ಕೆ ಕೈಹಾಕಿದ್ದನ್ನು ಬೆಂಗಳೂರು ನಗರ ಪೊಲೀಸ್ ಐಜಿಪಿ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ ನಿಂಬಾಳ್ಕರ್ ಅವರು ಪ್ರಶಂಸಿಸಿ ಈ ವಿಡಿಯೋವನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
‘ಒಬ್ಬ ಭಾರತೀಯನಾಗಿ ಇದು ನಮಗೆಲ್ಲಾ ಹೆಮ್ಮೆ ತರುವ ವಿಷಯ. ರಾಷ್ಟ್ರೀಯ ಭಾವನೆ ಮತ್ತು ಭಾವನಾತ್ಮಕ ವಿಚಾರಗಳಲ್ಲಿ ನಾವು ಪೊಲೀಸರೂ ಹೊರತಾಗಿಲ್ಲ. ಉತ್ತಮ ಮತ್ತು ಸ್ವಾಸ್ಥ್ಯ ಸಮಾಜಕ್ಕಾಗಿ ಕಾಯ್ದೆ ಕಾನೂನುಗಳಿರುತ್ತವೆ ಆದರೆ ಭಾರತೀಯನೆಂಬ ಭಾವನೆ ನಮ್ಮೆಲ್ಲರ ಒಳಗೂ ಇರುತ್ತದೆ’ ಎಂದು ನಿಂಬಾಳ್ಕರ್ ಅವರು ತಮ್ಮ ಈ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Comments are closed.