ಕರ್ನಾಟಕ

ಪ್ರಯಾಣಿಕರಿಲ್ಲದ ನಿಲ್ದಾಣಕ್ಕೆ ದಿನವೂ 300 ಬಸ್‌ ! !

Pinterest LinkedIn Tumblr


ಪೀಣ್ಯದಾಸರಹಳ್ಳಿ : ಈ ನಿಲ್ದಾಣಕ್ಕೆ ಪ್ರಯಾಣಿಕರು ಬರುವುದೇ ಅಪರೂಪ. ಬಂದರೂ ಬೆರಳೆಣಿಕೆಯಷ್ಟು ಮಾತ್ರ. ಆದರೆ, ನಿತ್ಯ ಸರಿ ಸುಮಾರು 300 ಬಸ್‌ಗಳು ಇಲ್ಲಿಗೆ ಬರುತ್ತವೆ !

ಆರಂಭದಿಂದಲೂ ನಷ್ಟಕ್ಕೆ ಮೂಲವಾದ ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣ ಈಗಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಗೆ ಹೊರೆಯಾಗಿಯೇ ಮುಂದುವರಿದಿದೆ. ರಾಜಧಾನಿಯಿಂದ ದೂರದ ಊರುಗಳಿಗೆ, ಹೊರ ರಾಜ್ಯಗಳಿಗೆ ಹೋಗುವ ಬಸ್ಸುಗಳು ಪೀಣ್ಯ ಬಸವೇಶ್ವರ ನಿಲ್ದಾಣಕ್ಕೆ ಕಡ್ಡಾಯವಾಗಿ ಹೋಗಬೇಕು ಎಂದು ನೀಡಿದ್ದ ಸೂಚನೆಯನ್ನು ಸಾರಿಗೆ ಇಲಾಖೆ ಹಿಂಪಡೆಯದ ಕಾರಣ ಈಗಲೂ ಹಲವು ಬಸ್ಸುಗಳು ಅಲ್ಲಿಗೆ ತೆರಳುತ್ತವೆ. ಆದರೆ ಜನರು ಮಾತ್ರ ಇತ್ತ ಬರುತ್ತಿಲ್ಲ.

ಪೀಣ್ಯ ಬಸವೇಶ್ವರ ನಿಲ್ದಾಣ ಜಾಲಹಳ್ಳಿ ವೃತ್ತದಿಂದ ಒಂದು ಕಿ.ಮೀ. ದೂರದಲ್ಲಿದೆ. ಬೀದರ್‌, ಕಲಬುರುಗಿ, ರಾಯಚೂರು, ಆಂಧ್ರಪ್ರದೇಶ ಮತ್ತಿತರೆಡೆ ತೆರಳುವ ಬಸ್ಸುಗಳು ಹೆದ್ದಾರಿಯಿಂದ ಮಾರ್ಗ ಬದಲಿಸಿ ಒಳ ಪ್ರದೇಶದಲ್ಲಿರುವ ಪೀಣ್ಯ ನಿಲ್ದಾಣಕ್ಕೆ ಬರುತ್ತವೆ. ಚಾಲಕರು ಸಂಚಾರ ನಿಯಂತ್ರಕರ ಬಳಿ ಸಹಿ ಹಾಕಿ ಮತ್ತೆ ಮುಂದುವರಿಯುತ್ತಾರೆ. ಇದರಿಂದಾಗಿ ನಿತ್ಯ 2 ಕಿ.ಮೀ. ಹೆಚ್ಚು ಕ್ರಮಿಸಬೇಕಾಗುತ್ತಿದೆ. ಇದರಿಂದ ಸಾರಿಗೆ ಇಲಾಖೆಗೆ ಸಾವಿರಾರು ರೂ. ವೆಚ್ಚವಾಗುತ್ತಿದೆಯಾದರೂ ಕನಿಷ್ಠ ಆದಾಯವೂ ಸಿಗುತ್ತಿಲ್ಲ. ಬೇರೆಡೆಯಿಂದ ರಾಜಧಾನಿಗೆ ಬರುವ ಬಸ್ಸುಗಳು ಇದೇ ರೀತಿ ಪೀಣ್ಯ ನಿಲ್ದಾಣಕ್ಕೆ ಬಂದು ಹೋಗುತ್ತವೆ.

”ಸಂಚಾರ ನಿಯಂತ್ರಕರ ಬಳಿ ಸಹಿ ಮಾಡಿಸಿಕೊಂಡು ಹೋಗಲಷ್ಟೇ ನಿಲ್ದಾಣಕ್ಕೆ ಬರುತ್ತಿದ್ದೇವೆ. ಪ್ರಯಾಣಿಕರು ಬರುವುದೇ ಅಪರೂಪ,” ಎಂದು ಹೆಸರು ಹೇಳಲಿಚ್ಛಿಸದ ಬಸ್‌ ಚಾಲಕರೊಬ್ಬರು ತಿಳಿಸಿದರು.

ಪ್ರಯಾಣಿಕ ಮಂಜುನಾಥ್‌ ಈ ಬಗ್ಗೆ ಪ್ರತಿಕ್ರಿಯಿಸಿ, ”ಬಸ್‌ ನಿಲ್ದಾಣ ಮುಖ್ಯರಸ್ತೆಗೆ ಹತ್ತಿರವಾಗಿದ್ದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಬಸ್‌ ನಿಲ್ದಾಣ ದೂರ ಇರುವುದರಿಂದ ಯಾರೂ ಈ ಕಡೆ ಬರುತ್ತಿಲ್ಲ,” ಎಂದರು.

ಪ್ರಯೋಗ ವಿಫಲ :
ಮೆಜೆಸ್ಟಿಕ್‌ನಲ್ಲಿವಿಪರೀತ ದಟ್ಟಣೆಯಾಗುತ್ತಿರುವ ಹಿನ್ನೆಲೆಯಲ್ಲಿನಗರದ ಹೊರವಲಯದಲ್ಲೇ ಬಸ್ಸುಗಳ ಆಗಮನ, ನಿರ್ಗಮನಕ್ಕೆ ವ್ಯವಸ್ಥೆ ಮಾಡುವ ಪ್ರಯತ್ನ ನಡೆದಿತ್ತು. 40 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಿದ ಈ ನಿಲ್ದಾಣ 2014ರಲ್ಲೇ ಸಿದ್ಧವಾಗಿತ್ತಾದರೂ ತಕ್ಷಣ ಕಾರ್ಯಾಚರಣೆ ಆರಂಭಿಸಿರಲಿಲ್ಲ. ಕಳೆದ ವರ್ಷ ಉತ್ತರ ಕರ್ನಾಟಕ ಭಾಗಕ್ಕೆ ಸಾಗುವ ಬಸ್ಸುಗಳನ್ನು ಇಲ್ಲಿಂದಲೇ ಕಾರ್ಯಾಚರಿಸುವಂತೆ ಪ್ರಯೋಗ ಮಾಡಲಾಗಿತ್ತು. ಬಿಎಂಟಿಸಿ ಸಂಪರ್ಕ ಬಸ್ಸಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಇದ್ಯಾವ ಪ್ರಯತ್ನ ಕೈಗೂಡದೆ ಸಾರಿಗೆ ಸಂಸ್ಥೆಗೆ ನಷ್ಟವಾಗತೊಡಗಿತು. ಇದರಿಂದ ಹೆಚ್ಚಿನ ಬಸ್ಸುಗಳನ್ನು ಮೊದಲಿನಿಂತೆಯೇ ಮೆಜೆಸ್ಟಿಕ್‌ನಿಂದ ಕಾರ್ಯಾಚರಿಸುವ ವ್ಯವಸ್ಥೆ ಮಾಡಲಾಗಿದೆ.

Comments are closed.