ಬೀದರ್: ಪೌರತ್ವ ತಿದ್ದುಪಡಿ ವಿಧೇಯಕ ಜಾರಿಯ ವಿಷಯದಲ್ಲಿ ಪ್ರಧಾನಿಗಳು ಸಂಸತ್ತಿನಲ್ಲಿ ಚರ್ಚೆಗೆ ಯಾಕೆ ಅವಕಾಶ ನೀಡಿಲ್ಲ? ಯಾವುದೇ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿಲ್ಲ ಯಾಕೆ ? ಜನರ ಅಭಿಪ್ರಾಯ ಪಡೆಯದೆ ಏಕಾಏಕಿ ಇಂಥಹ ಏಕಪಕ್ಷೀಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಗೆದುಕೊಂಡಿದ್ದಾದರೂ ಏಕೆ ಎಂದು ಮಾಜಿ ಸಚಿವ, ಶಾಸಕ ಎಂಬಿ ಪಾಟೀಲ್ ಪ್ರಶ್ನಿಸಿದರು.
ಬೀದರ್ನಲ್ಲಿ ಶನಿವಾರ ನಡೆದ ಸಹಜ ಶಿವಯೋಗ, ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಂಸತ್ತು ಇರುವುದು ಚರ್ಚಿಸುವುದಕ್ಕಾಗಿ. ಚರ್ಚೆಯ ನಂತರವೇ ಎಲ್ಲರ ಸಮ್ಮತಿ ಪಡೆದು ಕಾಯಿದೆ ಜಾರಿಗೆ ತಂದರೆ ಇಂಥಹ ಅನಾಹುತಗಳೇ ಆಗುತ್ತಿರಲಿಲ್ಲ. ಏಕಪಕ್ಷೀಯವಾಗಿ ಇಂಥಹ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಈ ಅನಾಹುತಗಳಿಗೆ ಕಾರಣ ಎಂದು ಎಂಬಿ ಪಾಟೀಲ್ ಕಿಡಿಕಾರಿದರು.
ಕಾಯಿದೆ ಜಾರಿಯಿಂದ ಯಾರಿಗೂ ತೊಂದರೆ ಇಲ್ಲ ಎಂದು ಪ್ರಧಾನಿಗಳು ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, “ಯಾರಿಗೂ ಸಮಸ್ಯೆ ಇಲ್ಲ ಎಂದ ಬಳಿಕ ಸಂಸತ್ತಿನಲ್ಲಿ ಈ ಕುರಿತು ಯಾಕೆ ಚರ್ಚಿಸಿಲ್ಲ ಎಂದು ಮರು ಪ್ರಶ್ನಿಸಿದರು. ಅಲ್ಲದೆ, ಇಂಥಹ ಕಾಯ್ದೆಗಳನ್ನು ತರುವಾಗ ಜನಾಭಿಪ್ರಾಯ ಪಡೆಯಬೇಕಾಗುತ್ತದೆ. ಇಲ್ಲವಾದರೆ ಅದು ಹಿಟ್ಲರ್ನ ಆಡಳಿತದಂತಾಗುತ್ತದೆ,” ಎಂದು ಎಂ.ಬಿ. ಪಾಟೀಲ್ ವ್ಯಾಖ್ಯಾನಿಸಿದರು.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟದ ವಿಷಯದಲ್ಲಿ ಕಾಂಗ್ರೆಸ್ನ ಕೈವಾಡ ಏನೂ ಇಲ್ಲ. ಬೆಂಕಿ ಹಚ್ಚುವ ಎಲ್ಲಾ ಕೆಲಸವನ್ನು ಬಿಜೆಪಿಯವರೇ ಮಾಡುತ್ತಿದ್ದಾರೆ ಎಂದ ಅವರು, ಸಂಸತ್ತಿನಲ್ಲಿ ಈ ಕುರಿತು ಚರ್ಚಿಸಿ, ಒಟ್ಟಾರೆ ಅಭಿಪ್ರಾಯ ಪಡೆದು ಮುನ್ನಡೆದರೆ ಯಾವುದೇ ವಿರೋಧ ವ್ಯಕ್ತವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಪೌರತ್ವ ತಿದ್ದುಪಡಿ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಅಮಾಯಕರ ಸಾವಿಗೆ ಬಿಜೆಪಿ, ಮೋದಿ, ಅಮಿತ್ ಶಾ ಹಾಗೂ ರಾಜ್ಯದಲ್ಲಿನ ಸಾವಿಗೆ ಸಿಎಂ, ಗೃಹ ಸಚಿವರು, ಉಸ್ತುವಾರಿ ಸಚಿವರು, ಕಮೀಷನರ್ ನೇರ ಕಾರಣಿಕರ್ತರು ಎಂದು ಎಂಬಿ ಪಾಟೀಲ್ ಹರಿಹಾಯ್ದರು.
Comments are closed.