ಬೆಂಗಳೂರು: ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಬೆಳಿಗ್ಗೆ ಹೇಳಿದ್ದರು. ಆದರೆ, ಅಚ್ಚರಿ ಎಂಬಂತೆ ಸಂಜೆ ವೇಳೆಗೆ ಈ ಪ್ರಕರಣವನ್ನು ಬಿಸ್ವೈ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಇದು ಈಗ ಸಾಕಷ್ಟು ಗೊಂದಲ ಸೃಷ್ಟಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಿಷೇಧಾಜ್ಞೆ ನಡುವೆಯೂ ಮಂಗಳೂರಿನಲ್ಲಿ ಪ್ರತಿಭಟನೆ ತಾರಕಕ್ಕೇರಿತ್ತು. ಹೀಗಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ವೇಳೆ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು.
ಮಂಗಳೂರಿಗೆ ಭೇಟಿ ನೀಡಿದ ಬಿಎಸ್ ಯಡಿಯೂರಪ್ಪ ಜಿಲ್ಲೆಯ ಸ್ಥಿತಿ-ಗತಿ ಹಾಗೂ ಗೋಲಿಬಾರ್ ಪ್ರಕರಣದ ಕುರಿತು ಪೊಲೀಸರಿಂದ ಮಾಹಿತಿ ಪಡೆದಿದ್ದರು. ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಅವರು ಸಾಂತ್ವನ ಹೇಳಿದ್ದರು. ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಹೇಳಿದ್ದರು.
ಆದರೆ, ಈಗ ಏಕಾಏಕಿ ಸರ್ಕಾರ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಉಡುಪಿಯ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಅಲ್ಲದೆ, ಮೂರು ತಿಂಗಳಲ್ಲಿ ತನಿಖಾ ವರದಿ ಕೊಡಲು ಸೂಚನೆ ನೀಡಲಾಗಿದೆ. ಬೆಳಗ್ಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ಹೇಳಿದ್ದ ಬಿಎಸ್ವೈ ಸಂಜೆ ವೇಳೆಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿರುವುದು ಸಾಕಷ್ಟು ಗೊಂದಲ ಸೃಷ್ಟಿಸಿದೆ.
Comments are closed.