ಬೆಂಗಳೂರು(ಡಿ.26): ಸಾರ್ವಜನಿಕ ಆಸ್ತಿ ಹಾನಿ ಮಾಡಿದರೆ ಅವರ ಆಸ್ತಿಯನ್ನು ಜಪ್ತಿ ಮಾಡಬೇಕಾಗುತ್ತದೆ. ಕಡ್ಡಾಯ ಕಾನೂನು ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಉತ್ತರ ಪ್ರದೇಶ ಮಾದರಿಯ ಕಾನೂನು ಜಾರಿ ಮಾಡಬೇಕಾಗುತ್ತದೆ ಎಂದು ಪೌರತ್ವ ಮಸೂದೆ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾಸೌಧದಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಖಡಕ್ ಎಚ್ಚರಿಕೆ ಕೊಟ್ಟರು. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. “ಪ್ರತಿಭಟನೆ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಅವರ ಆಸ್ತಿ ಜಪ್ತಿ ಮಾಡಲಾಗುವುದು. ಕಡ್ಡಾಯ ಕಾನೂನು ಜಾರಿ ಮಾಡಬೇಕಾಗುತ್ತೆ. ಈ ನೆಲದ ಕಾನೂನು ಗೌರವಿಸುವುದು ನಮ್ಮಲ್ಲರ ಕರ್ತವ್ಯ,” ಎಂದರು.
ಭಾರತ ಧರ್ಮಛತ್ರ ಅಲ್ಲ. ಕೇಂದ್ರ ಸರ್ಕಾರದ ಪೌರತ್ವ ಮಸೂದೆ ಕಾಯಿದೆ ಸರಿಯಿದೆ. ಪಾಕ್, ಬಾಂಗ್ಲಾದವರಿಗೆ ಭಾರತ ಧರ್ಮಛತ್ರ ಅಲ್ಲ ಎಂದು ಅಶೋಕ್ ಕಿಡಿಕಾರಿದರು.
ಇದೇ ವೇಳೆ, ಕಂಕಣ ಸೂರ್ಯ ಗ್ರಹಣ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶೋಕ್, “ಅತಿಯಾದ ನಂಬಿಕ ಸರಿಯಲ್ಲ. ನಾನು ವಿಜ್ಞಾನ ಮತ್ತು ಹಿರಿಯರ ಸಂಪ್ರದಾಯ ಎರಡನ್ನೂ ನಂಬುತ್ತೇನೆ. ಆದರೆ ನಾನು ಅತಿಯಾಗಿ ಯಾವುದನ್ನೂ ನಂಬಲ್ಲ. ಬೆಳಿಗ್ಗೆ ಮನೆಯಲ್ಲಿ ಪೂಜೆ ಮಾಡಿ ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದೇನೆ. ನನ್ನ ಕಚೇರಿಯಲ್ಲಿ ಯಾವುದೇ ಹೋಮ ಹವನ ಮಾಡಿಲ್ಲ,” ಎಂದರು.
Comments are closed.