ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್ನಲ್ಲಿ ಭಾರತೀಯ ಸೈನ್ಸ್ ಕಾಂಗ್ರೆಸ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಾರ್ಡನ್ ಸಿಟಿ ಬೆಂಗಳೂರನ್ನು ಹೊಗಳಿದರು. ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು, ಸ್ಟಾರ್ಟಪ್ ಸಿಟಿ ಕೂಡ ಹೌದು. ಪ್ರಪಂಚದ ವಿವಿಧ ದೇಶಗಳಿಂದ ಸಂಸ್ಥೆಗಳು, ವ್ಯಕ್ತಿಗಳು ಬಂದು ಇಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೆ. ಒಂದರ್ಥದಲ್ಲಿ ಬಂಡವಾಳ ಹೂಡಿಕೆಗೆ ಬೆಂಗಳೂರು ಸ್ವರ್ಗವಿದ್ದಂತೆ ಎಂದು ಮೋದಿ ಬೆಂಗಳೂರನ್ನು ಕೊಂಡಾಡಿದರು.
ಮುಂದುವರೆದ ಅವರು ಹೊಸ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನದ ಉನ್ನತೀಕರಣ, ಬಳಕೆ ಮತ್ತು ಸಂಶೋಧನೆ ಎಷ್ಟು ಅಗತ್ಯ ಎಂಬ ಬಗ್ಗೆ ಬೆಳಕು ಚೆಲ್ಲಿದರು. ಸಂಶೋಧನೆ, ಪೇಟೆಂಟ್, ಉತ್ಪಾದನೆ, ಪ್ರಗತಿ ಈ ನಾಲ್ಕು ಅಂಶಗಳು ಹೊಸ ಭಾರತದ ನಿರ್ಮಾಣಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಈ ಹೊಸ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನದ ಪಾತ್ರ ಅಪಾರ. ಸಾಮಾಜಿಕ, ಆರ್ಥಿಕ ಸ್ಥಿತಿಯ ಸುಧಾರಣೆ ಹಾಗೂ ಭಾರತವನ್ನು ಒಗ್ಗೂಡಿಸಲು ವಿಜ್ಞಾನದ ಹಾದಿ ಮುಖ್ಯವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಇಂದು ಜಿಕೆವಿಕೆಯಲ್ಲಿ 107ನೇ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನದ ಮಹತ್ವವನ್ನು ಸಾರಿದರು.
ಹೊಸ ವರ್ಷದ ಶುಭಕೋರಿ ಮಾತು ಆರಂಭಿಸಿದ ಅವರು, 2020ರ ವರ್ಷದಲ್ಲಿ ಭಾಗಿಯಾಗುತ್ತಿರುವ ಮೊದಲ ಸಮ್ಮೇಳನ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಎಂಬುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಮಾತಿನುದ್ದಕ್ಕೂ ಬೆಂಗಳೂರಿನ ಬಗ್ಗೆ ಹೊಗಳಿದ ಅವರು, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಬೆಂಗಳೂರು ಸೂಕ್ತ ಜಾಗ ಎಂದರು.
ಕಳೆದ 50 ವರ್ಷಗಳಲ್ಲಿ ವಿಜ್ಞಾನಿಗಳು ಅಪಾರ ಕೊಡುಗೆ ನೀಡಿದ್ದಾರೆ. ಯಾರು ಹೊಸ ಅನ್ವೇಷಣೆ ಮಾಡುತ್ತಾರೋ ಅವರಿಗೆ ಪೇಟೆಂಟ್ ಸಿಗುತ್ತೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿ ತಂತ್ರಜ್ಞಾನ ನಿಲ್ಲುತ್ತದೆ. ತಂತ್ರಜ್ಞಾನದಿಂದಲೇ ಸರ್ಕಾರದ ಎಲ್ಲಾ ಯೋಜನೆಗಳೂ ಯಶಸ್ವಿಯಾಗಿ ಜನರನ್ನು ತಲುಪುತ್ತಿವೆ, ಎಂದು ಮೋದಿ ಅಭಿಪ್ರಾಯಪಟ್ಟರು.
ಮಾಹಿತಿ ಮತ್ತು ತಂತ್ರಜ್ಞಾನ, ಕಡಿಮೆ ವೆಚ್ಚದಲ್ಲಿ ಡೇಟಾ ನೀಡಲಾಗುತ್ತಿದೆ. ಪರಿವರ್ತನೆ ಜೊತೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ತಂತ್ರಜ್ಞಾನ ಸಾಮಾನ್ಯ ಜನರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿದೆ. ಇದೇ ಕಾರಣದಿಂದ ಕಳೆದ 5 ವರ್ಷಗಳಲ್ಲಿ ಗ್ರಾಮೀಣ ಅಭಿವೃದ್ಧಿಯನ್ನ ಕಾಣುತ್ತಿದ್ದೀರಿ. ಸ್ವಚ್ಛ ಭಾರತ್ನಿಂದ ಆಯುಷ್ಮಾನ್ ಭಾರತ್ ಯೋಜನೆವರೆಗೆ ಹಳ್ಳಿಹಳ್ಳಿಯನ್ನು ತಲುಪಲು ಸಾಧ್ಯವಾಗಿದ್ದು ಇದೇ ತಂತ್ರಜ್ಞಾನ. ಏಕಕಾಲದಲ್ಲಿ ದೇಶದ 6 ಕೋಟಿ ರೈತರಿಗೆ ಕೃಷಿ ಸಮ್ಮಾನ್ ಹಣ ತಲುಪಿಸಿದ್ದೆವು. ಇದು ಕಾರಣವಾಗಿದ್ದು ತಂತ್ರಜ್ಞಾನದಿಂದ. 2 ಕೋಟಿ ಬಡವರಿಗೆ ಮನೆಗಳನ್ನ ನೀಡಿದ್ದೇವೆ ಇದಕ್ಕೆ ಕಾರಣ ತಂತ್ರಜ್ಞಾನ. ತಂತ್ರಜ್ಞಾನದಿಂದಾಗಿ ಮಧ್ಯವರ್ತಿ ಇಲ್ಲದೇ ರೈತರು ನೇರವಾಗಿ ಮಾರುಕಟ್ಟೆ ಜೊತೆ ವ್ಯವಹರಿಸಬಹುದು. ವ್ಯವಹಾರಸ್ಥರು-ಗ್ರಾಹಕರ ಮಧ್ಯೆ ನೇರ ವ್ಯವಹಾರಕ್ಕೆ ತಂತ್ರಜ್ಞಾನ ಕಾರಣ. ಭವಿಷ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ಮಾಡುತ್ತಿದ್ದು ಇದಕ್ಕೂ ತಂತ್ರಜ್ಞಾನ ಬಳಕೆ ಮಾಡುತ್ತೇವೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಪಣ ತೊಟ್ಟಿದ್ದು ಅದಕ್ಕೂ ತಂತ್ರಜ್ಞಾನ ಬಳಕೆ ಆಗುತ್ತಿದೆ.ಇದೇ ವೇಳೆ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಮುನ್ನುಗ್ಗಿ. ಈಗಿರುವ ಕನಸನ್ನ ಇನ್ನೊಂದು ಹೆಜ್ಜೆ ಮುಂದಿಟ್ಟು ನನಸು ಮಾಡಿ. ಇದರಿಂದ ನಿಮಗೆ ಮಾತ್ರವಲ್ಲ ಭಾರತದ ಅಭಿವೃದ್ಧಿ ಕೂಡ ಆಗಲಿದೆ. ಇನ್ಕ್ಯೂಬಿಲೇಟರ್ ಸಂಶೋಧನೆಯಲ್ಲಿ ಭಾರತ ಖ್ಯಾತಿ ಪಡೆದಿದೆ. ಅದಕ್ಕಾಗಿ ನಾನು ಭಾರತದ ಯುವ ವಿಜ್ಞಾನಿಗಳಿಗೆ ಅಭಿನಂದಿಸುತ್ತೇನೆ. ಅಲ್ಲದೇ ಇಂಜಿನಿಯರಿಂಗ್ನಲ್ಲಿ ಭಾರತಕ್ಕೆ ವಿಶ್ವಮಟ್ಟದಲ್ಲಿ ಹೆಸರಿದೆ ಎಂದು ಯುವ ವಿಜ್ಞಾನಿಗಳ ಕಾರ್ಯ ಶ್ಲಾಘಿಸಿದರು.
ಎಲ್ಲಿ ಆರೋಗ್ಯವೋ ಅಲ್ಲಿ ಸಮೃದ್ಧಿ ಎಂದು ಗಾಂಧೀಜಿ ಹೇಳಿದರು. ಇದಕ್ಕಾಗಿ ಆರೋಗ್ಯ, ಔಷಧಿ, ಡಯೋಗ್ನಾಸ್ಟಿಕ್ಗೆ ನಾವು ಹೆಚ್ಚು ಖರ್ಚು ಮಾಡುತ್ತೇವೆ. 2025ರೊಳಗೆ ಭಾರತ ಚುಚ್ಚುಮದ್ದು ಸರಬರಾಜಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಲಿದೆ.
ಹೊಸ ಮಾದರಿಯ ಬ್ಯಾಟರಿಗಳು ಅಭಿವೃದ್ಧಿಯಾಗುತ್ತಿದ್ದು, ಪರಿಸರಕ್ಕೆ ಪೂರಕವಾಗಿರಲಿದೆ. ನೀರು, ವಿದ್ಯುತ್, ಆಹಾರದ ಉತ್ಪಾದನೆಯಲ್ಲಿ ನಾವು ಮುಂದೆ ನಿಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಕೃಷಿ ವಿಜ್ಞಾನದಲ್ಲಿ ಹೊಸದೊಂದು ಕ್ರಾಂತಿಕಾರಕ ಹೆಜ್ಜೆ ಇಡಬೇಕು. ಹೈಸ್ಪೀಡ್ ಇಂಜಿನ್ಗಳನ್ನ ತಯಾರಿಸುತ್ತಿದ್ದು ಹೊಸ ಭಾರತ ಸೃಷ್ಟಿಯಾಗುತ್ತಿದೆ. ಹೊಸ ವರ್ಷದಲ್ಲಿ ಹೊಸ ಭಾರತದ ಕನಸನ್ನು ಎಲ್ಲರೂ ನನಸು ಮಾಡುತ್ತೀರಿ ಮತ್ತು ನೀವೆಲ್ಲಾ ಇದಕ್ಕೆ ಬೆಂಗಾವಲಾಗಿ ಇರುತ್ತೀರಿ ಎಂಬ ನಂಬಿಕೆ ಇದೆ ಎಂದರು.
Comments are closed.