ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ, ಪತ್ರಿಕಾ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.
‘ಹೊಸವರ್ಷದ ಪ್ರಾರಂಭದಲ್ಲಿಯೇ ರಾಜ್ಯದ ಪ್ರಸಿದ್ದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ಅಹವಾಲನ್ನು ದೇಶದ ಪ್ರಧಾನಮಂತ್ರಿಗಳಲ್ಲಿ ಸಲ್ಲಿಸಿದ್ದೇನೆ. ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಸಹಜವಾಗಿ ನಡೆಯುವಂತಹ ವಿದ್ಯಮಾನವಾಗಿದೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಬಿ.ಎಸ್.ವೈ. ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಪ್ರಧಾನಿಯವರು ನನ್ನ ಅಹವಾಲಿಗೆ ಕಿವಿಗೊಡಲಿಲ್ಲ ಎಂಬ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಮತ್ತು ಮಾಧ್ಯಮಗಳು ವಾಸ್ತವಾಂಶಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ಹೆಚ್ಚಿನ ನೆರವು ಮತ್ತು ಒಟ್ಟಾರೆಯಾಗಿ ಈ ಎಲ್ಲಾ ಯೋಜನೆಗಳಿಗೆ 50 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂಬ ಮನವಿಯನ್ನು ರೈತ ಸಮಾವೇಶದ ವೇದಿಕೆಯಲ್ಲೇ ಮಾಡುವುದು ಸೂಕ್ತ ಎಂದು ಅಲ್ಲಿ ಮಾಡಿದ್ದೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಮಂತ್ರಿಯವರ ದಕ್ಷ, ಪಾರದರ್ಶಕ, ಪ್ರಾಮಾಣಿಕ ಆಡಳಿತ ವೈಖರಿ ಇಡೀ ಜಗತ್ತಿಗೆ ಗೊತ್ತಿದೆ. ಇಡೀ ದೇಶಕ್ಕೆ ತಿಳಿದಿರುವಂತೆ, ಮೋದಿ ಸರ್ಕಾರ ರೈತರಿಗೆ ಅಭೂತಪೂರ್ವ ನೆರವು ನೀಡಿದೆ ಮಾತ್ರವಲ್ಲದೇ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿದೆ. ನಮ್ಮ ರಾಜ್ಯದ ಕೃಷಿಕರ, ನೀರಾವರಿ ಯೋಜನೆಗಳ ಅಗತ್ಯತೆಗಳು ಪ್ರಧಾನಿಯವರಿಗೆ ತಿಳಿದಿದೆ. ಇದುವರೆಗೆ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಎನ್ನುವುದೂ ಕೂಡ ಎಲ್ಲರಿಗೂ ತಿಳಿದಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
Comments are closed.