ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮೇಲಿನ ಅಸಮಾಧಾನದಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರು ನಂತರ ಹಲವು ಹೈಡ್ರಾಮಾಗಳ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬಾರಿಯ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನರ್ಹ ಶಾಸಕರ ಪೈಕಿ ಇಬ್ಬರು ಮಾತ್ರ ಸೋಲನ್ನು ಅನುಭವಿಸಿದ್ದರು. ಆ ಇಬ್ಬರು ತಮಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಯಡಿಯೂರಪ್ಪನವರ ಬಳಿ ಭಾರೀ ಲಾಬಿ ನಡೆಸುತ್ತಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ವಲಸೆ ಬಂದ ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ಬಿಜೆಪಿಯ ಹಲವು ನಾಯಕರಲ್ಲಿ ಅಸಮಾಧಾನ ಉಂಟಾಗಿತ್ತು. ಆ ಅಸಮಾಧಾನವನ್ನು ಶಮನ ಮಾಡುವುದರಲ್ಲಿ ಯಶಸ್ವಿಯಾಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ 14 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದ್ದರು. ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ಗೆ ಕೊನೆಕ್ಷಣದಲ್ಲಿ ಕೈಕೊಟ್ಟಿದ್ದ ಯಡಿಯೂರಪ್ಪ ಆ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು.
ಆದರೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ಮತ್ತು ಹುಣಸೂರಿನಲ್ಲಿ ಎಚ್.ಪಿ. ಮಂಜುನಾಥ್ ವಿರುದ್ಧ ಎಚ್. ವಿಶ್ವನಾಥ್ ಪರಾಭವಗೊಂಡಿದ್ದರು. ಈ ಸೋಲಿನಿಂದಾಗಿ ಸಚಿವರಾಗುವ ಕನಸು ಕಂಡಿದ್ದ ಈ ಇಬ್ಬರು ಹಿರಿಯ ನಾಯಕರಿಗೆ ಭಾರೀ ನಿರಾಸೆ ಉಂಟಾಗಿತ್ತು. ಆದರೂ ಪಟ್ಟು ಬಿಡದ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ತಮಗೆ ಸಚಿವ ಸ್ಥಾನ ನೀಡಬೇಕೆಂದು ಭಾರೀ ಲಾಬಿ ನಡೆಸತೊಡಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕ್ಯಾಬ್ ಡ್ರೈವರ್ಗಳೇ ಎಚ್ಚರ; ಚಾಲಕನನ್ನು ಯಾಮಾರಿಸಿ ಕಾರು ಕದ್ದ ಭೂಪ!
ಕಳೆದೊಂದು ತಿಂಗಳಲ್ಲಿ ಹಲವು ಬಾರಿ ಸಿಎಂ ಮನೆಗೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿರುವ ಎಂಟಿಬಿ ನಾಗರಾಜ್ ಇಂದು ಮತ್ತೆ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ಮನೆಗೆ ಭೇಟಿ ನೀಡಿದ್ದಾರೆ. ಚುನಾವಣೆಯಲ್ಲಿ ಸೋತಿರುವ ತಮಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗದ ಹಿನ್ನೆಲೆ ಲಾಬಿ ಮುಂದುವರೆಸಿರುವ ಎಂಟಿಬಿ ನಾಗರಾಜ್ ಹೇಗಾದರೂ ಮಾಡಿ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.
ಎಂಟಿಬಿ ನಾಗರಾಜ್ ಭೇಟಿಗೂ ಮೊದಲೇ ಇಂದು ಮುಂಜಾನೆ ಸಿಎಂ ಮನೆಗೆ ತೆರಳಿದ್ದ ಎಚ್. ವಿಶ್ವನಾಥ್ ಕೂಡ ತಮಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೇ ಮಂತ್ರಿಸ್ಥಾನ ನೀಡಲು ಬಿಜೆಪಿಯಲ್ಲಿ ಭಾರೀ ವಿರೋಧ ಕೇಳಿಬರುತ್ತಿವೆ. ಇರುವ ನಿಯಮಿತ ಸಚಿವ ಸ್ಥಾನಗಳಲ್ಲಿ ಮೂಲ ಬಿಜೆಪಿಗರಿಗೆ ಆದ್ಯತೆ ನೀಡುವುದೋ ಅಥವಾ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿರುವ ವಲಸಿಗರಿಗೆ ಅವಕಾಶ ನೀಡುವುದೋ ಎಂಬ ಗೊಂದಲದಲ್ಲಿರುವ ಸಿಎಂ ಯಡಿಯೂರಪ್ಪನವರಿಗೆ ಇದೀಗ ಪರಾಜಿತ ಅಭ್ಯರ್ಥಿಗಳ ಬೇಡಿಕೆ ತಲೆನೋವು ತಂದಿಟ್ಟಿದೆ.
Comments are closed.