ಕೊಟ್ಟೂರು (ಬಳ್ಳಾರಿ): “ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಆರ್ಯ ಪ್ರದೇಶಗಳಿಂದ ಬಂದವರಾಗಿದ್ದಾರೆ. ಒಡೆದು ಆಳುವ ನೀತಿ ಆರ್ಯ ಭಾಗದವರದ್ದು. ಹೀಗಾಗಿ ಒಗ್ಗಟ್ಟಿನಿಂದ ಸಾಮರಸ್ಯದಿಂದ ಇರುವ ದೇಶವನ್ನು ಒಡೆಯುವ ಹುನ್ನಾರ ನಡೆಸಿರುವ ಮೋದಿ ಶಾ ಜೋಡಿ ಪೌರತ್ವ ಕಾಯಿದೆ ಜಾರಿ ಮಾಡ ಹೊರಟಿದೆ,” ಎಂಬುದಾಗಿ ಲೇಖಕ ಕುಂ. ವೀರಭದ್ರಪ್ಪ ಹೇಳಿದರು.
ಪಟ್ಟಣದ ನಾನಾ ಮುಸ್ಲಿಂ ಸಂಘಟನೆಗಳು ಎನ್‌ಆರ್‌ಸಿ ಮತ್ತು ಸಿಎಎ ಜಾರಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ‘ದೇಶದ ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಎಂದೂ ಭಾಗವಹಿಸಿಲ್ಲ. ಆದರೆ ಬಹುತೇಕ ಮುಸ್ಲಿಂ ಸಮುದಾಯ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದೆ. ಆದರೆ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಜಾರಿ ತಂದಿರುವ ಕಾಯಿದೆ ದೇಶದಲ್ಲಿನ ಮುಸ್ಲಿಂ ಸಮುದಾಯ ಮಾತ್ರವಲ್ಲದೇ ಎಲ್ಲ ಸಮುದಾಯದವರಿಗೂ ಮಾರಕವಾಗಿದ್ದು, ಇದನ್ನು ನಾವೆಂದೂ ಜಾರಿ ಮಾಡಲು ಬಿಡದೇ ಹೋರಾಟ ನಡೆಸಬೇಕು,’ ಎಂದು ಕರೆ ನೀಡಿದರು.
ಉತ್ತರ ಪ್ರದೇಶದಲ್ಲಿ ಬಹು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವಿದ್ದರೂ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಲೋಕಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಮುಸ್ಲಿಂ ಸಮುದಾಯ ತಪ್ಪು ಮಾಡಿದೆ. ಜ್ಞಾನವಿಲ್ಲದ, ಬಡಾಯಿಗಳ ಸಂಸದರು ಬಿಜೆಪಿಯಲಿದ್ದಾರೆ. ಅವರ ಸಾಲಿಗೆ ಶಾಸಕ ಜಿ ಸೋಮಶೇಖರರೆಡ್ಡಿ ಸೇರಿದ್ದಾರೆ. ಎಲ್ಲಸಮುದಾಯಕ್ಕೂ ಅಪಾಯಕಾರಿಯಾಗಿರುವ ಪೌರತ್ವ ಕಾಯಿದೆ ವಿರುದ್ಧ ಶಾಂತಿಯುತ ಹೋರಾಟ ಮುಂದುವರೆಯಬೇಕು ಎಂದರು.
‘ವಿಜಯನಗರ ಜಿಲ್ಲೆ ರಚನೆಯಾಗಲಿ’
ಬಳ್ಳಾರಿಯಲ್ಲಿ ಶಾಸಕ ಜಿ ಸೋಮಶೇಖರ ರೆಡ್ಡಿ ಆಡಿದ ಮಾತುಗಳನ್ನು ಪ್ರಸ್ತಾಪಿಸಿದ ಕುಂವೀ, ‘ಗಣಿಯಿಂದಲೇ ಶ್ರೀಮಂತರಾದ ರೆಡ್ಡಿಯವರ ರಾಜಕೀಯ ಆಟ ಮುಗಿಯಬೇಕಾದರೆ ವಿಜಯನಗರ ಜಿಲ್ಲೆ ರಚನೆಯಾಗಲೇಬೇಕು’ ಎಂದರು.
ಶಾಸಕ ಎಸ್ ಭೀಮಾನಾಯ್ಕ ಮಾತನಾಡಿ, “ಚುನಾವಣೆಯಲ್ಲಿ ಮುಸ್ಲಿಂ ಜನ ಮತ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ದೇಶದಿಂದ ಓಡಿಸಲು ಪೌರತ್ವ ಕಾಯಿದೆಯನ್ನು ಜಾರಿ ಮಾಡಿದ್ದಾರೆ. ದೇಶದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯವನ್ನು ಕದಡುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಕಪ್ಪು ಹಣ ವಾಪಸ್ಸು ತರುವುದು, ಭ್ರಷ್ಟಾಚಾರ ನಿರ್ಮೂಲನೆ, ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿ ಅದ್ಯಾವುದನ್ನೂ ಮಾಡದೇ, ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡುವುದು, ಎನ್‌ಆರ್‌ಸಿ, ಸಿಎಎ ಜಾರಿ ಮಾಡುವುದನ್ನು ಮಾಡುತ್ತಿದ್ದಾರೆ. ಪ್ರವಾಹದಿಂದ ಉಂಟಾದ ಪರಿಹಾರ ಹಣ ನೀಡದೇ ಮಲತಾಯಿ ಧೋರಣೆ ತೋರಿದ್ದ ಪ್ರಧಾನಿಯವರಿಗೆ, ಸಭೆಯಲ್ಲಿ ನೇರವಾಗಿ ಹಣ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಹೇಳಿದರೂ ಕೇಳಿಸಿಕೊಳ್ಳದ ಪ್ರಧಾನಿ ವರ್ತನೆ ನಾಚಿಕೆ ತರಿಸುವಂತಹದ್ದಾಗಿದೆ. ಎಲ್ಲರೂ ಒಂದೇ ಎಂದು ಭಾವಿಸಿರುವ ನಾವು ಮುಸ್ಲಿಂರಿಗೆ ಎಂದಿಗೂ ಅನ್ಯಾಯವಾಗಲು ಬಿಡಲ್ಲ,’ ಎಂದರು.
ಪೌರತ್ವ ಬೆಂಬಲಿಸಿ ಬಳ್ಳಾರಿಯಲ್ಲಿ ಮಾತನಾಡಿದ್ದ ಶಾಸಕ ಜಿ ಸೋಮಶೇಖರ ರೆಡ್ಡಿ ವಿರುದ್ಧ ಶಾಸಕ ಭೀಮಾನಾಯ್ಕ ಹರಿಹಾಯ್ದರು. ಆಂಧ್ರ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ರಾಜಶೇಖರ ರೆಡ್ಡಿ ಆಶ್ರಯದಲ್ಲಿ ಬೆಳೆದಿರುವ ರೆಡ್ಡಿಗಳಿಗೆ ಕಾಂಗ್ರೆಸ್ ವಿರುದ್ಧ ಮಾತಾಡುವ ನೈತಿಕತೆ ಇಲ್ಲ. ಆಂಧ್ರ ಮೂಲದವರಾದ ನಿಮ್ಮನ್ನು ರಾಜ್ಯದಿಂದ ನಾವು ಓಡಿಸಬೇಕೇನು ಎಂದು ಪ್ರಶ್ನಿಸಿ, ‘ಸೋಮಶೇಖರ ರೆಡ್ಡಿ ಈ ಭಾಗಕ್ಕೆ ಬಂದರೆ ಅವರಿಗೆ ಘೇರಾವ್ ಹಾಕಿ ವಾಪಸ್ ಕಳಿಸಿ’ ಎಂದು ಕರೆ ಕೊಟ್ಟರು.
ಜಿಪಂ ಸದಸ್ಯ ಎಂಎಂಜೆ ಹರ್ಷವರ್ದನ ಮಾತನಾಡಿ, ಪೌರತ್ವ ಕಾಯಿದೆ ಕುರಿತು ಪ್ರಧಾನಿ ಮತ್ತು ಗೃಹ ಮಂತ್ರಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಎಲ್ಲಾ ಕಾರ್ಯಕ್ಕೂ ದೇಶ ಮೆಚ್ಚುತ್ತದೆ ಎಂದು ತಪ್ಪಾಗಿ ಭಾವಿಸಿರುವ ಅವರು ಪೌರತ್ವ ಕಾಯಿದೆ ವಿರುದ್ಧ ಎದ್ದಿರುವ ಪ್ರತಿರೋಧದಿಂದ ಹತಾಶೆಗೊಂಡಿದ್ದಾರೆ ಎಂದರು.
Comments are closed.