ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ ನಾಳೆ ಬುಧವಾರ ಭಾರತ್ ಬಂದ್ ಅಥವಾ ಮುಷ್ಕರ ನಡೆಯುತ್ತಿದೆ. ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲವಾಗಿ ನಿಂತಿವೆ. ಕರ್ನಾಟಕದ ರಾಜ್ಯ ರೈತ ಸಂಘ ಕೂಡ ಬಂದ್ಗೆ ಬೆಂಬಲ ನೀಡಿದೆ. ಬ್ಯಾಂಕ್ ಇತ್ಯಾದಿ ಸಂಘಟಿತ ವಲಯದ ಕಾರ್ಮಿಕರು ಈ ಬಂದ್ನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಎಡಪಂಥೀಯ ಸಂಘಟನೆಗಳು ಒಟ್ಟಾರೆಯಾಗಿ ನಾಳೆಯ ಬಂದ್ನಲ್ಲಿ ಮುಂಚೂಣಿಯಲ್ಲಿವೆ.
ಜ. 8ರಂದು ಭಾರತ್ ಬಂದ್ ನಡೆಸಲು ಸೆಪ್ಟೆಂಬರ್ ತಿಂಗಳಲ್ಲೇ ದಿನ ನಿಗದಿಪಡಿಸಲಾಗಿತ್ತು. ಕೇಂದ್ರದ ಕಾರ್ಮಿಕ, ರೈತ ಮತ್ತು ಆರ್ಥಿಕ ನೀತಿಗಳನ್ನು ಗಮನದಲ್ಲಿಟ್ಟುಕೊಂಡು ಬಂದ್ ನಡೆಸಲು ನಿಶ್ಚಯಿಸಲಾಗಿತ್ತು. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎನ್ಆರ್ಸಿ, ಸಿಎಎ, ಜೆಎನ್ಯು, ಶಿಕ್ಷಣ ನೀತಿ ಇತ್ಯಾದಿ ವಿಚಾರಗಳನ್ನೂ ಪ್ರತಿಭಟನೆಯಲ್ಲಿ ಸೇರಿಸಲಾಗಿದೆ.
ಪ್ರಮುಖ ಬೇಡಿಕೆ ಏನು?
ಕೇಂದ್ರದ ನೂತನ ಕಾರ್ಮಿಕ ನೀತಿಯೇ ಪ್ರತಿಭಟನೆಯ ಪ್ರಮುಖ ಅಂಶವಾಗಿದೆ. ಕಾರ್ಮಿಕ ವಲಯದ 44 ಕಾನೂನುಗಳನ್ನು ನಾಲ್ಕು ಸಂಹಿತೆಯಲ್ಲಿ ವಿಲೀನಗೊಳಿಸಲಾಗಿದೆ. ಈ ನೂತನ ನೀತಿಯು ಕಾರ್ಮಿಕ ವಿರೋಧಿಯಾಗಿದೆ. ಉದ್ಯಮಿಗಳಿಗೆ ಅನುಕೂಲವಾಗುವಂತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.
ಬೇಡಿಕೆಗಳು:
ನೂತನ ಕಾರ್ಮಿಕ ನೀತಿ ಕೈಬಿಡಬೇಕು
ಕನಿಷ್ಠ ವೇತನ ನಿಗದಿಗೊಳಿಸಬೇಕು,ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು
ಸಿಎಎ, ಎನ್ಆರ್ಸಿ, ಎನ್ಪಿಆರ್ ಹಿಂಪಡೆಯಬೇಕು
ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ನಿಗದಿ ಮಾಡಬೇಕು
ಆರ್ಥಿಕ ಸುಧಾರಣೆಗೆ ಗಮನ ಕೊಡಬೇಕು
ಜೆಎನ್ಯು ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು
ನಾಳೆ ಏನಿರಲ್ಲ?
ಆರು ಬ್ಯಾಂಕ್ ಯೂನಿಯನ್ಗಳು ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಬ್ಯಾಂಕ್ಗಳು ಬಾಗಿಲು ತೆರೆಯುವ ಸಾಧ್ಯತೆ ಇಲ್ಲ. ಎಸ್ಬಿಐ ಮತ್ತು ಸಿಂಡಿಕೇಟ್ ಬ್ಯಾಂಕ್ ಹೊರತುಪಡಿಸಿ ಉಳಿದ ಬ್ಯಾಂಕ್ಗಳ ಬಾಗಿಲು ಬಂದ್ ಆಗಲಿವೆ. ಎಟಿಎಂ ಸೇವೆಗಳೂ ಸ್ಥಗಿತಗೊಳ್ಳಲಿವೆ. ಆದರೆ, ಆನ್ಲೈನ್ ಬ್ಯಾಂಕಿಂಗ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಏನಿರುತ್ತೆ?
ಅಂಗಡಿ ಮುಂಗಟ್ಟು, ಆಸ್ಪತ್ರೆ, ಮೆಡಿಕಲ್ ಶಾಪ್ ಇತ್ಯಾದಿ ಅಗತ್ಯ ಸೇವೆಗಳು ಅಬಾಧಿತವಾಗಿರಲಿವೆ. ಬಸ್ಸು, ಆಟೋ, ಕ್ಯಾಬ್ ಸೇವೆಯೂ ಯಥಾಸ್ಥಿತಿಯಲ್ಲಿರಲಿವೆ.
ಅನೇಕ ವಿದ್ಯಾರ್ಥಿ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ನಾಳೆ ಶಾಲಾ ಕಾಲೇಜುಗಳು ತೆರೆದಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಸರ್ಕಾರಕ್ಕೆ ಎಷ್ಟು ನಷ್ಟ?
ಬಂದ್ಗೆ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳ ಹೇಳಿಕೆ ಪ್ರಕಾರ ನಾಳೆ ಸುಮಾರು 25 ಕೋಟಿ ಜನರು ಮುಷ್ಕರ ಮತ್ತು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲಿದ್ಧಾರೆ. ಹಾಗೇನಾದರೂ ಪೂರ್ಣಪ್ರಮಾಣದಲ್ಲಿ ಬಂದ್ ನೆರವೇರಿದಲ್ಲಿ ಸರ್ಕಾರಕ್ಕೆ ಸುಮಾರು 25 ಸಾವಿರ ಕೋಟಿ ರೂ ನಷ್ಟವಾಗುವ ಅಂದಾಜಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕೇಂದ್ರ ಸರ್ಕಾರಕ್ಕೆ ಈ ಮುಷ್ಕರ ಇನ್ನಷ್ಟು ಪೆಟ್ಟು ನೀಡಬಹುದು.
ರೈತ ಸಂಘ ಕಿಡಿ:
ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ಈಗ ಮಾತು ತಪ್ಪಿದೆ. ಆ ಪಕ್ಷಕ್ಕೆ ರೈತರ ಹಿತಕ್ಕಿಂತ ಅಂಬಾನಿ, ಅದಾನಿಯ ಹಿತವೇ ಮುಖ್ಯವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ಧಾರೆ. ರೈತರು ನಾಳೆ ಒಂದು ದಿನ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತರುವುದು ಬೇಡ. ಮಾರುಕಟ್ಟೆಯಿಂದ ಏನನ್ನೂ ಖರೀದಿಸುವುದು ಬೇಡ. ಒಂದು ದಿನ ಮನೆಯಲ್ಲೇ ಇರಬೇಕು ಎಂದು ಕೋಡಿಹಳ್ಳಿ ಕರೆ ನೀಡಿದ್ದಾರೆ.
Comments are closed.