ಬೆಂಗಳೂರು: ಸ್ವಸಹಾಯ ಗುಂಪುಗಳಿಂದ ಮಹಿಳಾ ಮೀನುಗಾರರು ಪಡೆದಿರುವ 50 ಸಾವಿರ ರೂ.
ವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು
ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರು, ಕಾರ್ಯಕರ್ತರ ಅಹವಾಲು ಆಲಿಸಿ ಮಾತನಾಡಿದರು. ರೈತರಿಗೆ ನೀಡಲಾಗುತ್ತಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ ಮೀನುಗಾರರಿಗೂ ಕ್ರೆಡಿಟ್ ಕಾರ್ಡ್ ನೀಡುವ ಕ್ರಾಂತಿಕಾರಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದ್ದಾರೆ. ಮೊದಲ
ಹಂತದಲ್ಲಿ 28,000 ದಿಂದ 30,000 ಮೀನುಗಾರರು ಈ ಕಾರ್ಡ್ ಪಡೆಯಲಿದ್ದಾರೆಂದರು.
ಅಗತ್ಯ ಸಾಲ: ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಮೀನುಗಾರರು 3 ಲಕ್ಷ ರೂ.ವರೆಗೆ,
ಮಧ್ಯಮ ಹಂತದ ಮೀನುಗಾರರು 2 ಲಕ್ಷ ರೂ.ವರೆಗೆ ಹಾಗೂ ಸಣ್ಣ ಮೀನುಗಾರರು ಒಂದು ಲಕ್ಷ ರೂ.ವರೆಗೆ ಸಾಲ ಪಡೆಯಬಹುದಾಗಿದೆ ಎಂದು ಹೇಳಿದರು. ಕಾರವಾರದಿಂದ ಉಲ್ಲಾಳದವರೆಗೆ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ಕಿರು ಬಂದರು ಅಭಿವೃದ್ಧಿಪಡಿಸಲಾಗುವುದು. ಸುಸಜ್ಜಿತ ಸೌಲಭ್ಯಗಳಿರುವ ದೋಣಿ ನಿಲ್ದಾಣ ನಿರ್ಮಿಸಲಾಗುವುದು. ಆ ಮೂಲಕ ಮೀನುಗಾರರ ಬದುಕಲ್ಲಿ ಬೆಳಕು ಮೂಡಿಸುವುದು ಸರ್ಕಾರ ಉದ್ದೇಶವಾಗಿದೆ ಎಂದರು.
ಬಜೆಟ್‌ನಲ್ಲಿ ಹೊಸ ಕೊಡುಗೆ: ಮುಂದಿನ ಬಜೆಟ್‌ನಲ್ಲಿ ಮೀನು ಮಾರಾಟಗಾರರಿಗೆ ಬೈಕ್ ನೀಡಿಕೆ, ಮೀನು ಮರಿಗಳ ಕೇಂದ್ರ ಸ್ಥಾಪನೆ ಕುರಿತು ಘೋಷಣೆಯಾಗಲಿದೆ. ಸಮುದ್ರ ಮೀನುಗಾರರ ರಕ್ಷಣೆ ಕುರಿತ ಯೋಜನೆಯನ್ನೂ ಘೋಷಿಸಲಾಗುವುದು ಎಂದು ಹೇಳಿದರು. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಹಿ ಘಟನೆ ಮರೆತು ಎಲ್ಲಾ ಸಮುದಾಯದವರು ಒಟ್ಟಾಗಿ ಬದುಕುವ ನಿಟ್ಟಿನಲ್ಲಿ ಸರ್ಕಾರದ ಸಾಮರಸ್ಯ ಸಭೆಗಳು ಯಶಸ್ವಿಯಾಗುತ್ತಿವೆ. ಇತ್ತೀಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಎರಡೂ ಸಮುದಾಯಗಳು ಶಾಂತಿ- ಸುವ್ಯವಸ್ಥೆಗೆ ಸಮ್ಮತಿಸಿವೆ ಎಂದು ತಿಳಿಸಿದರು.
ಸುಮಾರು 30 ದೇವಾಲಯಗಳಲ್ಲಿ ಸಿಬ್ಬಂದಿ ಕೊರತೆ, ಪೂಜಾ ಕೈಂಕರ್ಯ, ಅನುದಾನ ಇತರೆ
ಸಮಸ್ಯೆ ಬಗ್ಗೆ ಅಹವಾಲು ಸಲ್ಲಿಕೆಯಾಗಿದೆ. ಪಕ್ಷದ ಕಚೇರಿ ಯಲ್ಲಿ ಸಾರ್ವಜನಿಕರು, ಪಕ್ಷದ ಕಾರ್ಯ
ಕರ್ತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸುವ ಮೂಲಕ ಅವರ ಸಲಹೆ ಪಡೆಯಲು ಉತ್ತಮ
ಅವಕಾಶ ದೊರೆತಂತಾಗಿದೆ ಎಂದು ತಿಳಿಸಿದರು.
Comments are closed.