ಕರ್ನಾಟಕ

ರಾಯಣ್ಣ ಸಮಾಧಿ ಬಳಿ ಕಣ್ಣು ತೆರೆದನಾ ಆಂಜನೇಯ

Pinterest LinkedIn Tumblr


ಖಾನಾಪುರ: ತಾಲೂಕಿನ ನಂದಗಡ ಗ್ರಾಮದಲ್ಲಿಸಂಗೊಳ್ಳಿ ರಾಯಣ್ಣನಿಗೆ ಗಲ್ಲುಶಿಕ್ಷೆ ನೀಡಿದ ಸ್ಥಳದಲ್ಲಿರುವ ಮಾರುತಿ ದೇವರ ವಿಗ್ರಹದಲ್ಲಿಇತ್ತೀಚೆಗೆ ಇದ್ದಕ್ಕಿದ್ದಂತೆ ಒಂದು ಕಣ್ಣು ತೆರೆದುಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದೆ. ಆದರೆ, ”ಮಾರುತಿಯ ಒಂದು ಕಣ್ಣು ಪ್ರಕಟಗೊಂಡಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ”, ಎಂದು ತಾಲೂಕಿನ ಇಟಗಿ ಗ್ರಾಮದ ಸಂಶೋಧಕ ಡಾ.ಬಾಹುಬಲಿ ಹಂದೂರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ವಿಗ್ರಹ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ”ನಂದಗಡದ ಮಾರುತಿ ದೇವರ ವಿಗ್ರಹ ಪ್ರಾಚೀನವಾದುದಲ್ಲ. ತೀರಾ ಇತ್ತೀಚಿನ ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿದೆ. ವಿಗ್ರಹದ ಕಣ್ಣುಗಳೂ ಇತ್ತೀಚೆಗೆ ನಿರ್ಮಾಣಗೊಂಡಿದ್ದು, ದೇವರ ಮುಚ್ಚಿದ ಸ್ಥಿತಿಯಲ್ಲಿದ್ದ ಕಣ್ಣು ಈಗ ತೆರೆದಿದೆ ಎಂಬುದು ಶುದ್ಧ ಸುಳ್ಳು. ಇದು ಮೂಢನಂಬಿಕೆ ಮೂಲಕ ಭಕ್ತರಲ್ಲಿಅಂಧಶ್ರದ್ಧೆ ಮೂಡಿಸುವ ಪ್ರಯತ್ನ”, ಎಂದರು.

”ವಿಗ್ರಹದಲ್ಲಿರುವ ಕಣ್ಣುಗಳು ಮನುಷ್ಯನ ಕಣ್ಣಿನಂತೆ ಗೋಚರಿಸುತ್ತವೆಯಾದರೂ ಇವು ನೈಜವಲ್ಲ. ಈ ಕಣ್ಣುಗಳು ಹೊಳಪಿನಿಂದ ಕೂಡಿದ್ದು, ಇವುಗಳಿಗೆ ರಾಸಾಯನಿಕ ವರ್ಣ (ಎನಾಮಲ್‌ ಪೇಂಟಿಂಗ್‌) ಲೇಪನ ಮಾಡಲಾಗಿದೆ. ಸ್ಯಾಂಡ್‌ ಪೇಪರ್‌ನಿಂದ ಕಣ್ಣುಗಳನ್ನು ತಿಕ್ಕಿದಾಗ ಅವುಗಳಿಗೆ ಹಚ್ಚಿದ ಪೇಂಟ್‌ ಉದುರುತ್ತಿದೆ. ಹೀಗಾಗಿ ಇವು ಕೃತಕ ಕಣ್ಣುಗಳಾಗಿವೆ”, ಎಂದು ಅವರು ಮಾಹಿತಿ ನೀಡಿದರು.

2015ರಲ್ಲೂ ಇಂಥದ್ದೇ ಘಟನೆ

2015ರ ಆಗಸ್ಟ್‌ ತಿಂಗಳಲ್ಲಿ ಇದೇ ಮಾರುತಿ ವಿಗ್ರಹದ ಎರಡೂ ಕಣ್ಣುಗಳು ತೆರೆದುಕೊಂಡಿವೆ ಎಂಬ ವದಂತಿ ಹಬ್ಬಿತ್ತು. ಆಗ ಜಿಲ್ಲಾಡಳಿತದ ಸೂಚನೆಯಂತೆ ಈ ಕುರಿತು ಸಂಶೋಧನೆ ಕೈಗೊಂಡ ರಾಣಿ ಚನ್ನಮ್ಮ ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ.ಅಮರೇಶ ಯತಗಲ್‌ ಸ್ಥಳ ಪರಿಶೀಲಿಸಿದ ಬಳಿಕ, ವಿಗ್ರಹದಲ್ಲಿ ದೃಷ್ಟಿ ಪ್ರಕಟಗೊಂಡಿರುವ ವಿಷಯ ಸುಳ್ಳು. ಇದು ಮಾನವನ ಕೃತಕ ಸೃಷ್ಟಿ ಎಂದು ಸ್ಪಷ್ಟಪಡಿಸಿದ್ದರೆಂದು ಡಾ.ಹಂದೂರ ತಿಳಿಸಿದರು.

Comments are closed.