ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದ ವಿಫಲ ಕೇಂದ್ರ ಸರ್ಕಾರ, ಜನರ ಗಮನವನ್ನು ಬೇರೆಡೆ ತಿರುಗಿಸಲು ಎನ್‌ಆರ್‌ಸಿ, ಸಿಎಎ ಜಾರಿ ಮಾಡಲು ಹೊರಟಿದೆ. ಇದರ ವಿರುದ್ಧ ಎರಡನೇ ಸ್ವಾತಂತ್ರ್ಯ ಚಳವಳಿ ಅನಿವಾರ್ಯವಾಗಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ.
ನಗರದ ಕುಮಾರ ಕೃಪಾದ ಗಾಂಧಿ ಭವನ ಸಭಾಂಗಣದಲ್ಲಿ ದಲಿತ ಒಕ್ಕೂಟ ಬುಧವಾರ ಆಯೋಜಿಸಿದ್ದ ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ (ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್) ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರು ಇತ್ತೀಚೆಗೆ ‘ಅವರು’ ಶೇಕಡಾ 80, ‘ಇವರು’ 17 ಶೇಕಡಾ ಎಂದು ಹೇಳಿದ್ದಾರೆ. ಆದರೆ ಶೇಕಡಾ 99ರಷ್ಟು ಜನರು ಸಿಎಎ, ಎನ್‌ಆರ್‌ಸಿ ವಿರೋಧಿಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಚಹರೆ ಬಿಜೆಪಿಗೆ ಇಲ್ಲ. ಮೋದಿ- ಅಮಿತ್ ಶಾ ಅವರು ಇಡೀ ಬಿಜೆಪಿಯನ್ನೇ ನಾಶ ಮಾಡಲಿದ್ದಾರೆ. ಈ ಹಿಂದೆ ಫ್ಯಾಸಿಸ್ಟ್ ಹೇಗೆ ಎಲ್ಲರನ್ನೂ ನುಂಗಿ ಹಾಕಿತೋ ಅದೇ ರೀತಿ ಭಾರತದಲ್ಲೂ ಎಲ್ಲರನ್ನೂ ನಾಶಪಡಿಸಲಿದೆ ಎಂದು ಎಚ್ಚರಿಸಿದರು.
ಜಾತ್ಯತೀತ, ಸಮಾನತೆಯ ಮೂಲ ಆಶಯಗಳನ್ನು ಪ್ರತಿಪಾದಿಸುವ ಡಾ. ಬಿ.ಆರ್ ಅಂಬೇಡ್ಕರ್ ರೂಪಿಸಿರುವ ಸಂವಿಧಾನಕ್ಕೆ ಇಲಿಗಳ ರೀತಿಯಲ್ಲಿ ಬಿಲ ತೋಡುತ್ತಿರುವ ಆರ್ ಎಸ್ಎಸ್ ಮತ್ತು ಬಿಜೆಪಿಗೆ ದೇಶದ ವಿದ್ಯಾರ್ಥಿ ಸಮೂಹ ತಕ್ಕ ಉತ್ತರ ನೀಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಜತೆಗೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಭವ್ಯ ನರಸಿಂಹಮೂರ್ತಿ ಸೇರಿದಂತೆ ಹಲವು ನಾಯಕರು ದೇಶಾದ್ಯಂತ ತಿರುಗಾಡಿ ಹೋರಾಟವನ್ನು ಸಂಘಟಿಸುತ್ತಿರುವುದು ಹೊಸ ಭರವಸೆ ಮೂಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ದೇವನೂರು ಮಹಾದೇವ ಅವರ ಭಾಷಣವನ್ನು ಆಲಿಸಿದರು.
Comments are closed.