ಮಂಡ್ಯ: ಅಕ್ರಮ ಸಂಬಂಧಕ್ಕಾಗಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದಳು. ಇದೀಗ ಎರಡೂವರೆ ವರ್ಷದ ಹಿಂದೆ ಮಾಡಿದ್ದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮದ್ದೂರು ತಾಲೂಕಿನ ರಾಜೇಗೌಡನದೊಡ್ಡಿ ಗ್ರಾಮದ ನಿವಾಸಿ ರಂಗಸ್ವಾಮಿ ಕೊಲೆಯಾಗಿರುವ ವ್ಯಕ್ತಿ. ಅನೈತಿಕ ಸಂಬಂಧಕ್ಕಾಗಿ ರಂಗಸ್ವಾಮಿ ಪತ್ನಿ ರೂಪಾ ತನ್ನ ಪ್ರಿಯಕರ ಮುತ್ತುರಾಜನೊಂದಿಗೆ ಸೇರಿ ಕೊಲೆ ಮಾಡಿ ಚೆಂದಹಳ್ಳಿ ಗ್ರಾಮದ ಕೆರೆಯಲ್ಲಿ ಶವವನ್ನು ಹೂತುಹಾಕಿದ್ದರು.
ಏನಿದು ಪ್ರಕರಣ?
ರಂಗಸ್ವಾಮಿ ಮೂಲತಃ ಚಾಮರಾಜನಗರ ಜಿಲ್ಲೆಯ ರಾಮಪುರ ಗ್ರಾಮದ ನಿವಾಸಿಯಾಗಿದ್ದು, ಮದ್ದೂರಿನ ಭೀಮನಕೆರೆ ಗ್ರಾಮದ ಕಲ್ಲು ಕ್ವಾರೆಯಲ್ಲಿ ಕುಟುಂಬದೊಂದಿಗೆ ಕೆಲಸ ಮಾಡುತ್ತಿದ್ದನು. ಈ ವೇಳೆ ಅದೇ ಗ್ರಾಮದ ರೂಪಾಳ ಪರಿಚಯವಾಗಿತ್ತು. ನಂತರ ಇವರಿಬ್ಬರು ಪ್ರೀತಿಸುತ್ತಿದ್ದರು. ಆದರೆ ಜಾತಿ ಬೇರೆಯಾಗಿದ್ದರಿಂದ ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ರಂಗಸ್ವಾಮಿ ಮತ್ತು ರೂಪಾ ದೇವಸ್ಥಾನದಲ್ಲಿ ಮದುವೆ ಆಗಿ ರಾಜೇಗೌಡನದೊಡ್ಡಿಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
15 ವರ್ಷಗಳ ಕಾಲ ರಂಗಸ್ವಾಮಿ ಹಾಗೂ ರೂಪಾ ಅನೂನ್ಯವಾಗಿ ಸಂಸಾರ ನಡೆಸುತ್ತಿದ್ದರು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ನಂತರದ ದಿನಗಳಲ್ಲಿ ರೂಪಾಳ ವರ್ತನೆ ಬದಲಾಗಿದ್ದು, ಸಂಸಾರದಲ್ಲಿ ಬಿರುಕು ಮೂಡಿದೆ. ಈ ವೇಳೆ ರೂಪಾ ರಾಜೇಗೌಡನದೊಡ್ಡಿಯ ಮುತ್ತುರಾಜನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ರಂಗಸ್ವಾಮಿ ಕೆಲಸಕ್ಕೆ ಹೋದ ವೇಳೆ ರೂಪಾ ಮುತ್ತುರಾಜನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು.
ಇವರಿಬ್ಬರ ವಿಚಾರ ಪತಿ ರಂಗಸ್ವಾಮಿಗೆ ತಿಳಿಯುತ್ತದೆ. ಈ ಬಗ್ಗೆ ಪತ್ನಿಯ ಬಳಿ ಕೇಳಿದ್ದಾನೆ. ಈ ವಿಚಾರದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಆದರೆ ಜಗಳ ಮಾಡಿದ ನಾಲ್ಕೈದು ದಿನಗಳ ನಂತರ ರೂಪಾ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು. ಅದರಂತೆಯೇ ಪತಿಯನ್ನು ಕೊಂದು ಚೆಂದಹಳ್ಳಿದೊಡ್ಡಿಯಲ್ಲಿ ಹೂತುಹಾಕಿದ್ದರು. ನಂತರ ರಂಗಸ್ವಾಮಿ ಸಂಬಂಧಿಕರಿಗೆ ರೂಪಾ ನನ್ನ ಪತಿ ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಳು. ರಂಗಸ್ವಾಮಿ ಸಂಬಂಧಿಕರು ಈ ವಿಚಾರ ನಂಬಿ ಸುಮ್ಮನಾಗುತ್ತಾರೆ.
ಹೇಗೆ ಬೆಳಕಿಗೆ ಬಂತು ಪ್ರಕರಣ?
ರಂಗಸ್ವಾಮಿಯನ್ನು ಕೊಲೆ ಮಾಡಿದ ನಂತರ ರೂಪಾ ಒಬ್ಬ ಮಗನನ್ನು ಹಾಸ್ಟೆಲ್‍ಗೆ ಸೇರಿಸಿ ಉಳಿದ ಮಕ್ಕಳ ಜೊತೆ ಮದ್ದೂರಿನಲ್ಲಿ ಮನೆ ಮಾಡಿಕೊಂಡು ಮುತ್ತುರಾಜನೊಂದಿಗೆ ಇರುತ್ತಾಳೆ. ಎರಡೂವರೆ ವರ್ಷಗಳ ಕಾಲ ಇಬ್ಬರೂ ಸಹ ಸುಖವಾಗಿ ಇರುತ್ತಾರೆ. ಇತ್ತೀಚೆಗೆ ರೂಪಾ ಮತ್ತು ಮುತ್ತುರಾಜನ ನಡುವೆ ವೈಮನಸ್ಸು ಉಂಟಾಗುತ್ತದೆ. ನಂತರ ಇಬ್ಬರ ನಡುವೆ ಜಗಳವು ಸಹ ಆಗುತ್ತದೆ. ಜಗಳದ ನಡುವೆ ರಂಗಸ್ವಾಮಿ ಕೊಲೆಯ ವಿಚಾರವು ಸಹ ಹೊರಗೆ ಬರುತ್ತದೆ. ಬಳಿಕ ಈ ವಿಚಾರ ಮದ್ದೂರು ಪೊಲೀಸರಿಗೂ ವಿಷಯ ಮುಟ್ಟುತ್ತದೆ.
ವಿಷಯ ತಿಳಿದ ಪೊಲೀಸರು ರೂಪಾ ಮತ್ತು ಮುತ್ತುರಾಜನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ವಿಚಾರಣೆ ವೇಳೆ ರಂಗಸ್ವಾಮಿಯನ್ನು ನಾವೇ ಕೊಲೆ ಮಾಡಿದ್ದೇವೆ. ಕೊಂದು ಕೆರೆಯಲ್ಲಿ ಹೂತು ಹಾಕಿದ್ದೇವೆ ಎಂದು ಒಪ್ಪಿಕೊಳ್ಳಿಕೊಂಡಿದ್ದಾರೆ. ಸದ್ಯಕ್ಕೆ ಇಬ್ಬರು ಆರೋಪಿಗಳು ಪೊಲೀಸರ ಬಂಧನದಲ್ಲಿದ್ದು, ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಬಳಿಕ ಕೆರೆಯಲ್ಲಿ ಹೂತಿರುವ ರಂಗಸ್ವಾಮಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಒಳಪಡಿಸುತ್ತಾರೆ.
Comments are closed.