ಹರಿಹರ (ದಾವಣಗೆರೆ): ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಹರ ಜಾತ್ರೆಯ ಪ್ರಯುಕ್ತ ಆಯೋಜಿಸಲಾಗಿದ್ದ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರ ಮಾತಿನಿಂದ ಕೆರಳಿದ ಘಟನೆ ನಡೆಯಿತು.
ವೇದಿಕೆ ಮೇಲೆ ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರು ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲವಾದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದಾಗ ಕೋಪಗೊಂಡ ಸಿಎಂ ಬಿಎಸ್ವೈ, ನೀವು ಹೀಗೆಲ್ಲಾ ಮಾತನಾಡಬಾರದು. ನೀವು ಸಲಹೆ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು, ಎಂದು ಕುರ್ಚಿಯಿಂದ ಮೇಲೆದ್ದು ಹೇಳಿದರು. ಈ ವೇಳೆ ಸಿಎಂ ಮತ್ತು ಸ್ವಾಮೀಜಿ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.
ಸಿಎಂ ಮತ್ತು ಶ್ವಾಸಗುರು ನಡುವೆ ಮಾತಿನ ಚಕಮಕಿ
ಮುಖ್ಯಮಂತ್ರಿಗಳೇ ಮುರುಗೇಶ್ ನಿರಾಣಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಿಮ್ಮ ಬೆನ್ನ ಹಿಂದೆ ನಿಂತು ಬೆನ್ನೆಲುಬಾಗಿ ನಿಂತಿದ್ದಾರೆ. ಅವರನ್ನು ಕೈ ಬಿಡಲು ಹೋಗಬೇಡಿ. ಒಂದು ವೇಳೆ ನೀವು ನಿರಾಣಿಯನ್ನು ಕೈಬಿಟ್ಟರೆ ಇಡೀ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈಬಿಡುತ್ತದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಅವರ ಮಾತನ್ನು ತಡೆದು, ಕುರ್ಚಿಯಿಂದ ಎದ್ದು, ನೀವು ಹೀಗೆಲ್ಲಾ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ, ಎಂದು ನಿಂತುಕೊಂಡೇ ಮಾತನಾಡುವಾಗ, ಸ್ವಾಮೀಜಿಗಳು, “ಅಲ್ಲಾ, ನಾವು ಸತ್ಯವನ್ನು ಹೇಳುತ್ತಿದ್ದೇವೆ. ಕುಳಿತುಕೊಳ್ಳಿ ನೀವು ಕುಳಿತುಕೊಳ್ಳಿ,” ಎಂದು ಹೇಳಿದರು. ಆಗ ಸಿಎಂ, “ತಾವು ಹೀಗೆಲ್ಲಾ ಮಾತನಾಡಬಾರದು. ನಿಮ್ಮಿಂದ ಈ ಮಾತು ಬರುತ್ತದೆ ಎಂದುಕೊಂಡಿರಲಿಲ್ಲ. ಈಗಾದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ತಾವು ಸಲಹೆ ನೀಡಬಹುದೇ ಹೊರತು ಬೆದರಿಸಬಾರದು,” ಎಂದು ಸಿಎಂ ಗರಂ ಆಗಿ ಹೇಳಿದರು.
ಆಗ ವಚನಾನಂದ ಸ್ವಾಮೀಜಿ, “ನೋಡ್ರಿ ನಾವು ಸಲಹೆಯನ್ನೇ ಕೊಡುತ್ತಿರುವುದು. ಬೆದರಿಸಲು ಹೋಗುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನ್ಯಾಯವನ್ನು ಕೇಳುತ್ತಿದ್ದೇವೆ,” ಎಂದು ಹೇಳಿ ಮಾತು ಮುಂದುವರೆಸಿದಾಗ ನೆರೆದಿದ್ದ ಜನರು ಶಿಳ್ಳೆ-ಚಪ್ಪಾಳೆ ತಟ್ಟಿದರು. ಸಿಡಿಮಿಡಿಗೊಂಡೇ ಕುರ್ಚಿಯಲ್ಲಿ ಮತ್ತೆ ಕುಳಿತ ಸಿಎಂ ಬಿಎಸ್ವೈ ಅವರು ಎಡಭಾಗದಲ್ಲಿ ಕುಳಿತಿದ್ದ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕೋಪದಲ್ಲಿ ಏನನ್ನೊ ಹೇಳುತ್ತಿದ್ದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಮೊದಲ ಬಾರಿಗೆ ಹರ ಜಾತ್ರೆ ನಡೆಯುತ್ತಿದೆ. ಜಾತ್ರೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಬೆಳ್ಳಿ ಬೆಡುಗು ಕಾರ್ಯಕ್ರಮಕ್ಕೆ ಸಿಎಂ ಬಿಎಸ್ವೈ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಮಠಾದೀಶರು, ಸಚಿವರು ಭಾಗಿಯಾಗಿದ್ದರು. ಶ್ವಾಸ ಗುರು ವಚನಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಹರ ಜಾತ್ರೆ ನಡೆಯುತ್ತಿದೆ.
Comments are closed.