ಕರ್ನಾಟಕ

‘ನಿನ್ನ ಮದುವೆ ಆಗ್ತೀನಿ, ಬೇರೆ ಲವರ್ಸ್ ಜೊತೆ ಸುತ್ತಾಡ್ತೀನಿ’

Pinterest LinkedIn Tumblr


ಚಿತ್ರದುರ್ಗ: ಪ್ರೀತಿ ಮಾಡಿದ ಮೇಲೆ ಎಷ್ಟೇ ವಿರೋಧ ವ್ಯಕ್ತವಾದರೂ ಸಹ ಪ್ರೀತಿಯ ಬಲೆಗೆ ಜೋಡಿಹಕ್ಕಿಗಳು ಎಲ್ಲರ ಕಣ್ತಪ್ಪಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ಹಣದ ಮೇಲಿನ ವ್ಯಾಮೋಹದಿಂದಾಗಿ ಪ್ರೀತಿ ಮಾಡಿ ಮದುವೆಯಾಗ್ತಿನಿ ಅಂತ ನಂಬಿಸಿ, ಪ್ರೇಯಸಿಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಪೀಕಿದ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ಉಮೇಶ್ ಪ್ರೀತಿ ಹೆಸರಲ್ಲಿ ವಂಚಿಸಿರುವ ಭೂಪ. ಚಿತ್ರದುರ್ಗದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಡಿಪ್ಲೋಮಾ ಮಾಡುತ್ತಿದ್ದ ಈತ ಕೆಳಗೋಟೆಯ ಯುವತಿ ಜೊತೆ ಸ್ನೇಹ ಬೆಳೆಸಿದ್ದನು. ಬಳಿಕ ಮೊಬೈಲ್‍ನಲ್ಲಿ ಮಾತಿನಿಂದಲೇ ಯುವತಿಯ ಮನಸೆಳೆದು ಪ್ರೀತಿ ಎಂಬ ಹಳ್ಳಕ್ಕೆ ಬೀಳಿಸಿದ್ದನು.

ಇಬ್ಬರು ಸಹ ನಾಯಕ ಸಮುದಾಯದವರಾಗಿದ್ದರಿಂದ ಇಬ್ಬರ ನಡುವೆ ಪ್ರೀತಿ ಗಟ್ಟಿಯಾಗಿತ್ತು. ಯುವತಿಯ ಮನೆಯಲ್ಲಿ ನಾಟಕ ಮಾಡಿ ಎರಡು ಕುಟುಂಬದ ನಡುವೆ ಮಾತುಕಥೆ ನಡೆಸಿ ಮದುವೆಗೂ ಒಪ್ಪಿಸಿದ್ದನು. ಹೀಗಾಗಿ ಹೇಮಾ ಉಮೇಶ್‍ನನ್ನು ತುಂಬಾ ನಂಬಿದ್ದಳು. ಆದರೆ ಹೇಮಾಗೆ ಉಮೇಶ್ ಪಂಗನಾಮ ಹಾಕಿ ಅವಳಿಂದ 15 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾನೆ. ತನ್ನ ಉನ್ನತ ವ್ಯಾಸಂಗಕ್ಕಾಗಿ ಸಂಗ್ರಹಿಸಿಟ್ಟಿದ್ದ ಹಣವನ್ನು ವಂಚಕನಿಗೆ ಕೊಟ್ಟು ಖಾಲಿ ಕೈ ಆದ ಬಳಿಕ ಯುವತಿಗೆ ವಂಚಿಸಿರೋ ಆಸಾಮಿಯ ಅಸಲಿ ಬಣ್ಣ ಬಯಲಾಗಿದೆ.

ಈಕೆಗಷ್ಟೇ ಅಲ್ಲದೇ ಇನ್ನು ಅನೇಕ ಯುವತಿಯರು ಹಾಗೂ ಮಹಿಳೆಯರೊಂದಿಗೆ ಈತ ಪ್ರೀತಿಯ ನಾಟಕವಾಡಿ ಕೆಲವರೊಂದಿಗೆ ಅಕ್ರಮ ಸಂಬಂಧವನ್ನು ಸಹ ಹೊಂದಿದ್ದನು. ಈ ಸತ್ಯ ಉಮೇಶ್‍ನ ಮೊಬೈಲ್‍ನಿಂದಲೇ ಬಯಲಾಗಿದೆ. ಇದರಿಂದಾಗಿ ಈತನ ಅಸಲಿ ಬಂಡವಾಳ ಅರಿತ ಯುವತಿ ತಾನು ಕೊಟ್ಟ ಲಕ್ಷಾಂತರ ರೂಪಾಯಿ ಹಣವನ್ನು ವಾಪಾಸ್ ಕೇಳಿದ್ದಾಳೆ. ಈ ಅಬಲೆಯ ಮಾತಿಗೆ ಆಸಾಮಿ ಸೊಪ್ಪು ಹಾಕದೇ ನಾನು ನಿನ್ನ ಮದುವೆಯಾಗುತ್ತೇನೆ. ಹಾಗೆಯೇ ಇನ್ನುಳಿದ ಲವರ್ಸ್‍ಗಳ ಜೊತೆಯೂ ಚೆನ್ನಾಗಿರ್ತೆನೆಂದು ದೌರ್ಜನ್ಯವೆಸೆಗಿದ್ದಾನೆ. ಹೀಗಾಗಿ ಮನನೊಂದ ಯುವತಿ ಚಿತ್ರದುರ್ಗದ ಮಹಿಳಾ ಠಾಣೆ ಪೊಲೀಸರ ಮೊರೆ ಹೋಗಿದ್ದಾಳೆ.

ತಮ್ಮ ಮಗಳ ಬದುಕು ಹಸನಾಗಿರಲೆಂದು ಯೋಚಿಸಿದ್ದ ಯುವತಿಯ ತಾಯಿ ಸಹ ಉಮೇಶ್ ಕೇಳಿದಾಗೆಲ್ಲಾ ಹಣ, ಬೈಕ್ ಹಾಗೂ ಕಾರು, ಮೊಬೈಲ್ ಎಲ್ಲವನ್ನು ನೀಡಿದ್ದರು. ಉಮೇಶ್ ನಾಟಕವನ್ನೇ ನಿಜವೆಂದು ನಂಬಿ ತಮ್ಮ ಮಗಳಿಗೆ ಈತ ತಕ್ಕ ವರ ಎಂದುಕೊಂಡಿದ್ದರು. ಆದರೆ ಅವನಿಗೆ ಪ್ರೀತಿಗಿಂತ ಹಣವೇ ಮುಖ್ಯವೆಂಬ ಅಸಲಿ ಬಣ್ಣ ಆತನ ಮೊಬೈಲ್‍ನಿಂದಲೇ ಬಯಲಾಗಿದ್ದು, ಎಚ್ಚೆತ್ತ ಯುವತಿಯ ಪೋಷಕರು ತಮ್ಮ ಮಗಳಿಗಾದಂತಹ ವಂಚನೆ ಮತ್ತೆ ಯಾರ ಮಕ್ಕಳಿಗೂ ಆಗದಿರಲಿ ಎಂದು ಚಿತ್ರದುರ್ಗ ಎಸ್‍ಪಿ ಡಾ.ಅರುಣ್ ಅವರಿಗೆ ದೂರು ನೀಡಿದ್ದಾರೆ.

ವಂಚಕನಿಂದ ಹಣ ವಾಪಸ್ ಕೊಡಿಸಿ, ನಮ್ಮ ಮಗಳಿಗೆ ಆದ ವಂಚನೆಗೆ ನ್ಯಾಯ ಕೊಡಿಸಿ. ಆಕೆಯ ಮುಂದಿನ ಬದುಕಿಗೆ ಆತನಿಂದ ಯಾವುದೇ ತೊಂದರೆ ಆಗದಂತೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಪೊಲೀಸರು ನೊಂದವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

Comments are closed.