ಬೆಂಗಳೂರು: ಟೌನ್‍ಹಾಲ್ ಎದುರು ನಡೆದ ಸಿಎಎ ಪರ ಪ್ರತಿಭಟನೆ ವೇಳೆ ಸಂಸದ ತೇಜಸ್ವಿಸೂರ್ಯ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಎಸ್‍ಡಿಪಿಐ ಕಾರ್ಯಕರ್ತರು ಸ್ಕೆಚ್ ಹಾಕಿದ್ದರು ಎಂಬ ನಗರ ಪೊಲೀಸ್ ಆಯುಕ್ತರು ಅಘಾತಕಾರಿ ಮಾಹಿತಿ ಇಂದು ಹೊರಹಾಕಿದ್ದಾರೆ. ಆದರೆ ಘಟನೆಗೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ ಎಂದು ಎಸ್‍ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಇಲಿಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ತುಂಬೆ ಅವರು, ಪ್ರಕರಣದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಬಂಧಿತರಾಗಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಂದ ಪಡೆದಿದ್ದೇವೆ. ಆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದು, ಆ ವೇಳೆ ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರಲ್ಲ ಎಂಬುವುದು ತಿಳಿದು ಬಂದಿದೆ ಎಂದರು.
ನಮ್ಮ ಸಂಘಟನೆಯ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈ ಆರೋಪವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಾಬೀತು ಮಾಡದಿದ್ದರೆ ಅವರು ಒಬ್ಬ ಸುಳ್ಳುಗಾರ ಎನಿಸಿಕೊಳ್ಳುತ್ತಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಅವರ ಅಧಿಕಾರದಲ್ಲಿ ಮೇಲೇರಲು, ಯಾರನ್ನೋ ಮೆಚ್ಚಿಸಲು ಈ ಆರೋಪ ಮಾಡಿದ್ದಾರೆ. ಮಾಧ್ಯಮಗಳು ಕೂಡ ಸುಖಾಸುಮ್ಮನೆ ವರದಿ ಮಾಡುತ್ತಿದೆ. ನಮ್ಮ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರೆ ಎಂದಾದರೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಕಾನೂನಿನ ಅಡಿ ಶಿಕ್ಷೆ ಕೊಡಿಸುವ ಕಾರ್ಯಕ್ಕೆ ಮುಂದಾಗಬೇಕು. ಕಮಿಷನರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದರೆ ನಾವು ಅವರು ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು.
ಬಿಜೆಪಿ ಪಕ್ಷದವರಿಗೆ ಸೈದ್ಧಾಂತಿಕವಾಗಿ ನಮ್ಮನ್ನು ಎದುರಿಸಲು ಸಾಧ್ಯವಾಗದೇ ಹೀಗೆಲ್ಲಾ ಮಾಡುತ್ತಿದ್ದಾರೆ. ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರು ಎಂದು ಹೇಳಲು ಕಮಿಷನರ್ ಅವರ ಬಳಿ ಯಾವ ಸಾಕ್ಷಿಯಿದೆ ಇದೆ. ಈ ಆರೋಪಿಗಳಿಗೂ ಎಸ್‍ಡಿಪಿಐಗೂ ಸಂಬಂಧವೇ ಇಲ್ಲ. ಆದರೆ ಇದು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿರುವ ಆರೋಪ. ಭಾಸ್ಕರ್ ರಾವ್ ಜೊತೆರೊಂದಿಗೆ ಯಾರಿದ್ದಾರೆ ಎಂಬುವುದು ನಮಗೂ ಗೊತ್ತಿದೆ ಎಂದರು. ಇದೇ ವೇಳೆ ಮಂಗಳೂರು ಕಮಿಷನರ್ ಹರ್ಷ ವಿರುದ್ಧ ಕ್ರಮ ಕೈಗೊಂಡಿದ್ದಾರಾ ಎಂದು ತುಂಬೆ ಆಕ್ರೋಶ ವ್ಯಕ್ತಪಡಿಸಿದರು.
Comments are closed.