ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ ಎಂದು ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹಾಡಿ ಹೊಗಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ಮೋದಿ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ವಾರಣಾಸಿಯಲ್ಲಿ ಪವಿತ್ರ ಗಂಗಾ ಸ್ನಾನಮಾಡಿ, ಗಂಗಾ ಆರತಿಯಲ್ಲಿ ಭಾಗಿಯಾಗಿದ್ದನ್ನು ಅಮಿತ್ ಶಾ ಉಲ್ಲೇಖಿಸಿದರು.
ಶಂಕರಾಚಾರ್ಯರು ಅದ್ವೈತ ಮಾರ್ಗದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಹೇಳಿದ್ದರು. ಭಕ್ತಿ, ಕರ್ಮ, ಜ್ಞಾನದ ಬಗ್ಗೆ ಅವರು ನಂಬಿಕೆ ಇಟ್ಟಿದ್ದರು. ಯಾವುದೇ ಮಾರ್ಗದಿಂದಲೂ ಜೀವನ ಕಲ್ಯಾಣವಾಗಬಹುದು ಎಂದು ಅವರು ನಂಬಿದ್ದರು ಎಂದು ಅಮಿತ್ ಶಾ ಹೇಳಿದರು.
ವಿವೇಕ ದೀಪಿನಿ ಕಾರ್ಯಕ್ರಮದಲ್ಲಿ ಶ್ರೀ ಶಂಕರಭಾರತಿ ಸ್ವಾಮಿಗಳ ಸಾನಿಧ್ಯ ವಹಿಸಿದ್ದು, ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನಮಾಲಿಕೆಗಳ ಸಂಗ್ರಹವಾದ ವಿವೇಕ ದೀಪಿನಿಯನ್ನು ಬೆಂಗಳೂರು ಜಿಲ್ಲೆಯ ಲಕ್ಷಾಂತರ ವಿದ್ಯಾರ್ಥಿಗಳು ಸಾಮೂಹಿಕ ಪಠನ ಮಾಡಿದರು.
Comments are closed.