ಸೂಲಿಬೆಲೆ (ಬೆಂಗಳೂರು ಗ್ರಾಮಾಂತರ): ಕಡಿಮೆ ಬೆಲೆಗೆ ಚಿನ್ನದ ಕಾಯಿನ್ ಹಾಗೂ ಬಿಸ್ಕೆಟ್‌ನ ಆಸೆ ಹೊತ್ತು ಹೊರ ರಾಜ್ಯದಿಂದ ಹಣದ ಸಮೇತ ಬಂದಿದ್ದ ವ್ಯಕ್ತಿಯೊಬ್ಬನನ್ನು ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಯಾಮಾರಿಸಿ ಹಣ ಎಸ್ಕೇಪ್ ಮಾಡಿಕೊಂಡು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣ ರಾಜ್ಯದ ಸಿಖಂದರಾಬಾದ್ ಟೌನ್ ನಿವಾಸಿ ರಮೇಶ್ ಲಾಲ್ ಚಿನ್ನದ ನಾಣ್ಯದ ಮೋಹಕ್ಕೆ ಒಳಗಾಗಿ ಮೋಸ ಹೋದ ವ್ಯಕ್ತಿ.
ತೆಲಂಗಾಣ ರಾಜ್ಯದ ರಮೇಶ್ ಲಾಲ್ ಜೊತೆ ಕೆಲಸ ಮಾಡುತ್ತಿದ್ದ ದುರ್ಗ ಪ್ರಸಾದ್, ತನ್ನ ಸ್ನೇಹಿತ ಹಾಜಿಮಲನ್ ಎಂಬಾತನಿಗೆ ಬೆಂಗಳೂರಿನ ನಿವಾಸಿ ರಾಜಣ್ಣ ಎಂಬುವರ ಬಳಿ ಎರಡು ಕೆಜಿಯಷ್ಟು ಬಂಗಾರವಿದೆ ಎಂದು ನಂಬಿಸಿದ್ದ. ಅದನ್ನು ಕಡಿಮೆಬೆಲೆಗೆ ಕೊಡಿಸುತ್ತೇನೆ ಎಂದು ರಮೇಶ್ ಲಾಲ್‌ಗೆ ಪುಸಲಾಯಿಸಿದ್ದ. ಕಡಿಮೆ ಬೆಲೆಗೆ ಚಿನ್ನದ ಕಾಯಿನ್ ಸಿಗುತ್ತೆ, ಅದನ್ನು ಖರೀದಿಸಿ ಒಡವೆ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿದ್ದ ರಮೇಶ್ ಲಾಲ್ ಕುಟುಂಬ ಮತ್ತು ಇತರೆ ಸ್ನೇಹಿತರಿಂದ 65 ಲಕ್ಷದಷ್ಟು ಹಣವನ್ನು ಸಂಗ್ರಹಿಸಿದ್ದ.
ರಮೇಶ್ ಲಾಲ್, ಹಾಜಿಮಲನ್, ಈತನ ಮಗ ಸಮೀರ್, ಜಲೀಲ್ ಹಾಗೂ ದುರ್ಗ ಪ್ರಸಾದ್ ಜೊತೆಗೂಡಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಅಸಲಿ ಚಿನ್ನದ ನಾಲ್ಕೈದು ನಾಣ್ಯಗಳನ್ನು ತೋರಿಸಿ ರಮೇಶ್ ಲಾಲ್‌ಗೆ ದುಷ್ಕರ್ಮಿಗಳು ನಂಬಿಕೆ ಹುಟ್ಟಿಸಿದರು. ಜನವರಿ 14 ರಂದು ಹೊಸಕೋಟೆಗೆ ಬಂದ ರಮೇಶ್ ಲಾಲ್, ಹಣದ ಸಮೇತ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದಾರೆ. ಹಾಜಿಮಲನ್, ಈತನ ಮಗ ಸಮೀರ್ ಇನ್ನಿಬ್ಬರೊಂದಿಗೆ ರಮೇಶ್ ಉಳಿದುಕೊಂಡಿದ್ದರು. ಲಾಡ್ಜ್ ಗೆ ಬಂದು ಚಿನ್ನದ ನಾಣ್ಯ ರೆಡಿ ಇದೆ. ನಿಮ್ಮಲ್ಲಿ ಹಣ ರೆಡಿ ಇದೆಯಾ? ಎಂದು ಕೇಳಿದ ದುಷ್ಕರ್ಮಿಗಳು, ಇಲ್ಲಿ ವ್ಯವಹಾರ ಮಾಡೋದು ಬೇಡ, ಹೊರಗಡೆ ಬನ್ನಿ ಕೊಡಿಸುತ್ತೇನೆ ಎಂದು ಹಣದ ಸಮೇತ ಕೆಂಪು ಬಣ್ಣದ ಟಾಟಾ ಸುಮೋದಲ್ಲಿ ಹೊಸಕೋಟೆ ಜಂಗಮಕೋಟೆಯ ರಸ್ತೆಯ ಅಂಜನಾದ್ರಿ ಲೇಔಟ್ ಒಳಭಾಗಕ್ಕೆ ಕರೆದುಕೊಂಡು ಹೋದರು. ಇದನ್ನು ನಂಬಿ ಬಟ್ಟೆ ಬ್ಯಾಗಿನಲ್ಲಿ ತಂದಿದ್ದ 65 ಲಕ್ಷ ರೂ ಹಣ ಕೊಟ್ಟ ರಮೇಶ್ ಲಾಲ್, ಎಣಿಸಿಕೊಳ್ಳಿ ಎಂದರು. ಹಣ ಎಣಿಸುವ ನಾಟಕವಾಡಿದ ಅಸಾಮಿಗಳು, ಇದಕ್ಕಿದಂತೆಯೇ ಪೊಲೀಸ್ ಪೊಲೀಸ್ ಎಂದು ಕೂಗಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಆಗ ತಾನು ಮೋಸ ಹೋಗಿರುವುದನ್ನು ಅರಿತುಕೊಂಡ ರಮೇಶ ಲಾಲ್ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೂಲಿಬೆಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.