ಬೆಂಗಳೂರು (ಜ.23): ಮಂಗಳೂರು ಬಾಂಬ್ ಪತ್ತೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೆ, ಈ ಕೃತ್ಯದ ಹಿಂದೆ ಉಗ್ರರ ಕೈವಾಡವಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ನನಗೂ ಉಗ್ರರಿಗೂ ಯಾವುದೆ ಸಂಬಂಧವಿಲ್ಲ ಎಂದು ಬಂಧಿತ ಆರೋಪಿ ಆದಿತ್ಯ ರಾವ್ ವಿಚಾರಣೆ ವೇಳೆ ಸ್ಪಷ್ಟನೆ ನೀಡಿದ್ದಾನೆ.
ಸೋಮವಾರ ಮಂಗಳೂರು ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಪತ್ತೆಯಾಗಿತ್ತು. ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಟೋ ಮೂಲಕ ವ್ಯಕ್ತಿಯೋರ್ವ ಬಂದಿದ್ದ . ಈ ವೇಳೆ ಬಾಂಬ್ ಇದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ. ಈ ಬ್ಯಾಗ್ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿತ್ತು. ಇದರ ಹಿಂದೆ ಉಗ್ರರ ಕೈವಾಡವಿದೆ ಎನ್ನುವ ವಿಚಾರ ಚರ್ಚೆಯಲ್ಲಿರುವಾಗಲೇ ಪ್ರಕರಣದ ಆರೋಪಿ ಪೊಲೀಸರಿಗೆ ಶರಣಾಗಿದ್ದ.
ಪೊಲೀಸರು ಆದಿತ್ಯನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾನೆ. “ಬಾಂಬ್ ಇಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದವು. ಸಿಕ್ಕಿ ಬೀಳುವ ಭಯ ಶುರುವಾಗಿತ್ತು. ಘಟನೆ ಬಳಿಕ ತಪ್ಪಿನ ಅರಿವಾಗಿತ್ತು. ನಾನು ದೇಶದ್ರೋಹಿ ಕೆಲಸ ಮಾಡುವವನಲ್ಲ. ವ್ಯವಸ್ಥೆ ಹಾಳಾಗಿರುವುದನ್ನು ಸರಿಪಡಿಸಬೇಕೆಂದು ಬಾಂಬ್ ಇಟ್ಟೆ,” ಎಂದಿದ್ದಾನೆ ಆದಿತ್ಯ.
ಪೊಲೀಸರು ಗುಂಡು ಹಾರಿಸಿದರೆ ಎನ್ನುವ ಭಯದಿಂದ ಆದಿತ್ಯ ಪೊಲೀಸರಿಗೆ ಶರಣಾಗಿದ್ದಾನಂತೆ. “ಇತ್ತೀಚೆಗೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸುವ ಪ್ರಕರಣಗಳು ಹೆಚ್ಚಾಗಿವೆ. ನನಗೂ ಗುಂಡು ಹೊಡೆಯಬಹುದು ಎಂಬ ಭಯವಿತ್ತು. ಹೀಗಾಗಿ ಡಿಜಿಪಿ ಕಚೇರಿಗೆ ಬಂದು ಶರಣಾಗಲು ನಿರ್ಧರಿಸಿದೆ,” ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
Comments are closed.