ಬೆಂಗಳೂರು: ತಡವಾದರೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಂದುಕೊಂಡಂತೆ 13 ಶಾಸಕರನ್ನು ಸಂಪುಟಕ್ಕೆ ಸೇರಿಕೊಳ್ಳಲು ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಚರ್ಚೆ ನಡೆಸಿ 10+3 ಫಾರ್ಮುಲಾಗೆ ಅಸ್ತು ಎನಿಸಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರ ಪೈಕಿ 10 ಶಾಸಕರಿಗೆ ಮಂತ್ರಿ ಭಾಗ್ಯ. ಇನ್ನುಳಿದಂತೆ ಮೂವರು ಮೂಲ ಬಿಜೆಪಿ ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಚಿವರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಕಂಡು ಬರುತ್ತಿದ್ದು, ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಥಾನ ಲಭಿಸುವ ನಿರೀಕ್ಷೆ ಇದೆ.
ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿರುವುದರಿಂದ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರದೊಳಗೆ ತಮ್ಮ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಉಳಿದಂತೆ 10 ಅನರ್ಹರಿಗೆ ಸಚಿವ ಸ್ಥಾನ ನೀಡಲು ಅಮಿತ್ ಶಾ ಒಪ್ಪಿಗೆ ಕೊಟ್ಟಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಮೂಲ ಬಿಜೆಪಿಗರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿಗೂ ಸಚಿವ ಸ್ಥಾನ ಸಿಗಲಿದೆ. 10 ಅರ್ಹರಿಗೆ ಯಾವ ಖಾತೆ ನೀಡಬೇಕೆಂಬುದು ಅಮಿತ್ ಶಾ ಸಮ್ಮುಖದಲ್ಲಿ ತೀರ್ಮಾನವಾಗಿದ್ದು, ಇದು ಸದ್ಯಕ್ಕೆ ಅತ್ಯಂತ ಗೌಪ್ಯವಾಗಿಡಲಾಗಿದೆ.
ಹೊಸದಾಗಿ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸದಂತೆ ವರಿಷ್ಠರು ಸೂಚಿಸಿದ್ದು, ಈಗಿರುವ ಡಿಸಿಎಂಗಳಿಗೆ ಯಾವುದೇ ಆತಂಕವಿಲ್ಲ. ಜುಲೈ ವರೆಗೆ ಮೂವರು ಡಿಸಿಎಂಗಳು ಹಾಗೂ ಹಾಲಿ ಸಚಿವರು ಸೇಫ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಷರತ್ತು ಹಾಕಿದ ಅಮಿತ್ ಷಾ
ಭಾವೀ ಸಚಿವರು ಪ್ರಮಾಣ ವಚನ ಸ್ವೀಕರಿಸಲು ಫೆ.10ರವರೆಗೆ ಕಾಯಬೇಕಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಯಡಿಯೂರಪ್ಪ ನಡುವೆ ನಡೆದ ಮಾತುಕತೆಯಲ್ಲಿ ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ದೆಹಲಿ ಚುನಾವಣೆ ನಂತರ ಪ್ರಮಾಣ ವಚನ ಕಾರ್ಯಕ್ರಮ ಮಾಡಿ ಎಂದು ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
Comments are closed.