ಧಾರವಾಡ: ಹುಬ್ಬಳ್ಳಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಾಕ್ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತೂ ಆರೋಪಿಗಳ ಪರ ಜಾಮೀನಿಗೆ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರು ಹೈಕೋರ್ಟ್ ಮಧ್ಯಸ್ಥಿಕೆಯ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರೋಪಿಗಳ ಪರ ವಕಾಲತ್ತು ವಹಿಸಲು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲರಿಗೆ ಭಾರಿ ಭದ್ರತೆ ನೀಡಲಾಗಿತ್ತು. ಕೋರ್ಟ್ ಆವರಣ ಹಾಗೂ ಸುತ್ತಮುತ್ತ ಐದು ನೂರು ಪೊಲೀಸರನ್ನು ನಿಯೋಜಿಸಲಾಗಿತ್ತು.
ಬೆಳಿಗ್ಗೆಯಿಂದಲೇ ಭದ್ರತೆ ಇದ್ದರೂ ವಕೀಲರು ಬೆಳಗಾವಿಯಿಂದ ಮಧ್ಯಾಹ್ನ 2:25ಕ್ಕೆ ಬಂದರು. ಪೊಲೀಸರು ಕೋರ್ಟಿನ ಹಿಂಬಾಗಿಲಿನಿಂದ ಕರೆ ತಂದು ಹತ್ತೇ ನಿಮಿಷಗಳಲ್ಲಿ ಪ್ರಕ್ರಿಯೆ ಮುಗಿಸಿ ಬಳಿಕ ಮತ್ತೆ ಅದೇ ಬಾಗಿಲಿನಿಂದ ಕರೆದುಕೊಂಡು ಹೋದರು. ಈ ಮಧ್ಯೆ ಬೆಂಗಳೂರಿನ ವಕೀಲರು ಬಂದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಕೋರ್ಟ್ ಆವರಣದ ಹೊರಗೆ ಗೋ ಬ್ಯಾಕ್ ಘೋಷಣೆ ಕೂಗಿದ ಘಟನೆ ಕೂಡಾ ನಡೆಯಿತು.
ಕೋಟಿ9ನಲ್ಲಿ ಮಧ್ಯಾಹ್ನ 2 ರಿಂದ 2:45 ರವರೆಗೆ ಊಟದ ಸಮಯ. ಈ ವೇಳೆ ಯಾವುದೇ ಅರ್ಜಿ ಸ್ವೀಕರಿಸುವುದಿಲ್ಲ. ಆದರೆ ಈ ವೇಳೆ ಹೇಗೆ ಅರ್ಜಿಯನ್ನು ಸ್ವೀಕರಿಸಲಾಯಿತು ಎಂಬ ಪ್ರಶ್ನೆ ಮುನ್ನೆಲೆಗೆ ಬಂತು. ಸಣ್ಣ ಪ್ರಕ್ರಿಯೆಯೊಂದಕ್ಕೆ ಇಡೀ ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗಗೊಂಡಿದ್ದಲ್ಲದೇ ಇದೀಗ ಮತ್ತೆ ನಿಯಮ ಬಿಟ್ಟು ಅರ್ಜಿ ಸ್ವೀಕರಿಸಿದ್ದಕ್ಕೆ ಧಾರವಾಡದ ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.
ಫೆಬ್ರವರಿ 24 ರಂದು ಮೂವರು ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಧಾರವಾಡದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆಗಮಿಸಿದಾಗ ಸ್ಥಳೀಯ ವಕೀಲರು ವಿರೋಧ ವ್ಯಕ್ತಪಡಿಸಿ ಸಾಕಷ್ಟು ಗಲಾಟೆ ನಡೆದಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಂದಿದ್ದ ವಕೀಲರು ಧಾರವಾಡ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದೇ ವಾಪಸಾಗಿದ್ದರು. ಇದಾದ ಬಳಿಕ ಬೆಂಗಳೂರು ಹೈಕೋರ್ಟ್ ಮಧ್ಯಸ್ಥಿಕೆ ವಹಿಸಿ, ಆರೋಪಿಗಳ ಹಕ್ಕನ್ನು ರಕ್ಷಿಸುವಂತೆ ವಕೀಲರು ಹಾಗೂ ಪೊಲೀಸರಿಗೆ ಕೆಲವು ಸೂಚನೆ ನೀಡಿತ್ತು. ಈ ಹಿನ್ನೆಲೆ ಇವತ್ತು ಆರೋಪಿ ಪರ ಅರ್ಜಿ ಸಲ್ಲಿಸಲು ಬಂದ ವಕೀಲರಿಗೆ ಭಾರಿ ಭದ್ರತೆ ನೀಡಲಾಗಿತ್ತು.
Comments are closed.