ಮೈಸೂರು/ ಹೊಸದಿಲ್ಲಿ: ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಬಳಸ ದಂತೆ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದ ಸರಕಾರಿ ಕಚೇರಿಗಳಲ್ಲೂ ಬಯೋಮೆಟ್ರಿಕ್ ನಿರ್ಬಂಧಕ್ಕೆ ಚಿಂತನೆ ಆರಂಭವಾಗಿದೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಡಾ| ಸುಧಾಕರ್, ಮುಂಜಾಗ್ರತೆಯಾಗಿ ಬಯೋ ಮೆಟ್ರಿಕ್ ಹಾಜರಾತಿ ಸ್ವಲ್ಪ ದಿನ ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ. ಶುಕ್ರವಾರವಷ್ಟೇ ಮಾ.31ರ ವರೆಗೆ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಬಳಸಬಾರದು ಎಂದು ಸೂಚನೆ ನೀಡಲಾಗಿತ್ತು.
ಐಪಿಎಲ್ ಮುಂದೂಡಿಕೆ?
ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ಮುಂದೂಡುವ ಕುರಿತಂತೆ ಚರ್ಚೆ ನಡೆಯುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಇದೇ ಮಾ.29ರಿಂದ ಐಪಿಎಲ್ ಆರಂಭವಾಗಬೇಕಿದ್ದು, ಮುಂಬಯಿಯಲ್ಲೇ ಮೊದಲ ಪಂದ್ಯ ನಡೆಯಲಿದೆ. ಹೆಚ್ಚು ಜನರು ಸೇರಿದ ಕಡೆಯಲ್ಲಿ ವೈರಸ್ ಹಬ್ಬುವ ಭೀತಿ ಇರುವುದರಿಂದ ಮುಂದೂಡಿಕೆ ಬಗ್ಗೆ ಚರ್ಚೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಐಪಿಎಲ್ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮತ್ತೆ ಮೂವರಿಗೆ ಸೋಂಕು
ಮತ್ತೂಂದೆಡೆ ದಿನಗಳೆದಂತೆ ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದ್ದು, ಶನಿವಾರ ಲಢಾಖ್‌ನಲ್ಲಿ ಇಬ್ಬರಿಗೆ, ತಮಿಳುನಾಡಿನಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ದೇಶಾದ್ಯಂತ ಸೋಂಕಿತರ ಸಂಖ್ಯೆ 34ಕ್ಕೇರಿದೆ. ಲಢಾಖ್‌ನಲ್ಲಿ ಸೋಂಕು ತಗುಲಿರುವ ವ್ಯಕ್ತಿಗಳು ಇರಾನ್‌ಗೆ ಪ್ರಯಾಣ ಬೆಳೆಸಿ, ವಾಪಸಾಗಿದ್ದರು. ಅಂತೆಯೇ ತಮಿಳುನಾಡಿನ ವ್ಯಕ್ತಿ ಇತ್ತೀಚೆಗೆ ಒಮಾನ್‌ಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಕೊರೊನಾ ಸೋಂಕಿನ ಕೇಂದ್ರ ಚೀನದಲ್ಲಿ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದರೂ ಒಟ್ಟು 94 ದೇಶಗಳಿಗೆ ಈ ವೈರಸ್ ವ್ಯಾಪಿಸಿರುವುದು ಆತಂಕ ಮೂಡಿಸಿದೆ.
ಪ್ರಧಾನಿ ಸಭೆ
ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಶನಿವಾರ ಎಲ್ಲ ಸಚಿವಾಲಯಗಳೊಂದಿಗೆ, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಸಾಕಷ್ಟು ನಿಗಾ ಕೇಂದ್ರಗಳ ಸ್ಥಾಪನೆಗೆ ಸ್ಥಳಗಳನ್ನು ಗುರುತಿಸುವಂತೆ ಮತ್ತು ವೈರಸ್ ಇನ್ನಷ್ಟು ವ್ಯಾಪಿಸಿದರೆ ತುರ್ತು ನಿಗಾ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಜನಸಂದಣಿ ಇರುವಂಥ ಕಾರ್ಯಕ್ರಮ ಗಳನ್ನು ಆಯೋಜಿಸದಂತೆ ಮತ್ತು ಅಂಥವು ಗಳಲ್ಲಿ ಭಾಗಿಯಾಗದಂತೆ ಜನರಿಗೆ ಸಲಹೆ ನೀಡಬೇಕು; ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ಬಗ್ಗೆ ಜಾಗೃತಿ ಮೂಡಿ ಸಬೇಕು ಎಂದೂ ಮೋದಿ ನಿರ್ದೇಶಿಸಿದ್ದಾರೆ.
52 ಲ್ಯಾಬ್‌ಗಳು ಸಿದ್ಧ
ದೇಶದಲ್ಲಿ ಕ್ಷಿಪ್ರವಾಗಿ ಸೋಂಕು ಪತ್ತೆಗೆ ನೆರವಾಗುವಂತೆ ದೇಶಾದ್ಯಂತ 52 ಪ್ರಯೋಗಾಲಯಗಳನ್ನು ಆರಂಭಿಸಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಘೋಷಿಸಿದೆ. ಕೋವಿಡ್-19ನ ರಕ್ತದ ಮಾದರಿಗಳ ಸಂಗ್ರಹಕ್ಕೆ ಹೆಚ್ಚುವರಿ 57 ಪ್ರಯೋಗಾಲಯಗಳೂ ನೆರವಾಗಲಿವೆ. ಮಾ.6ರ ವರೆಗೆ ಒಟ್ಟು 4,058 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಇಲಾಖೆ ತಿಳಿಸಿದೆ.
Comments are closed.