ಕರ್ನಾಟಕ

ಕರೋನಾ ವೈರಸ್: ಕೆಎಸ್‌ಆರ್‌ಟಿಸಿಯಲ್ಲಿ ಶೇ.20ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆ

Pinterest LinkedIn Tumblr


ಬೆಂಗಳೂರು: ದೇಶದಲ್ಲಿ ಕರೋನಾ ವೈರಸ್‌ ಸೋಂಕು ಹರುಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇ.20ರಷ್ಟು ಕಡಿಮೆ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಐರಾವತ, ಫೈಬಸ್‌, ಮುಂತಾದ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತಕಂಡಿದೆ. ಈ ಹಿನ್ನೆಲೆಯಲ್ಲಿ ವಿದೇಶಿಯರು ಒಳಗೊಡಂತೆ ಭಾರತದ ವಿವಿಧ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರು ಸಂಚರಿಸುತ್ತಿದ್ದು, ಪ್ರಯಾಣಿಕರು ಮತ್ತು ನಿಗಮದ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಸೋಂಕು ಹರಡಂತೆ ಕೆಲವೊಂದು ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ.

ಬಸ್‌ನ ಒಳ ಮತ್ತು ಹೊರ ಭಾಗವನ್ನು ಸ್ವತ್ಛವಾಗಿಡುವುದರ ಜತೆಗೆ ಬಸ್‌ಗಳ ಒಳಗೆ ಸಾರ್ವಜನಿಕ ಪ್ರಯಾಣಿಕರು ಬಳಸುವ ವಸ್ತುಗಳನ್ನು ಸೋಂಕು ನಿವಾರಣಾ ದ್ರಾವಣಗಳಿಂದ ಶುಚಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಐರಾವತ, ಫೈಬಸ್‌, ಮುಂತಾದ ಪ್ರತಿಷ್ಠಿತ ಸಾರಿಗೆಗಳಲ್ಲಿ “ಆಂಟಿ ಬ್ಯಾಕ್ಟಿರಿಯಲ್‌ ಸಲ್ಯೂಷನ್‌’ ಗಳನ್ನು ಬಳಸಿ ಸಿಂಪಡಣೆ (ಪ್ಯೂಮಿಗೇಷನ್‌) ಮಾಡಲಾಗುತ್ತಿದೆ. ದೂರ ಮಾರ್ಗದ ಐರಾವತ ಸಾರಿಗೆಗಳಲ್ಲಿ ಚಾಲನಾ ಸಿಬ್ಬಂದಿಗೆ ಮಾಸ್ಕ್ಗಳನ್ನು ವಿತರಿಸಲಾಗಿದೆ. ಬಸ್‌ ನಿಲ್ದಾಣಗಳನ್ನು ಆಗಿಂದಾಗ್ಗೆ ಶುಚಿಗೊಳಿಸಲಾಗುತ್ತಿದೆ. ನಿಗಮದ ಬಸ್‌ ನಿಲ್ದಾಣಗಳಲ್ಲಿ ಜಿಂಗಲ್ಸ್‌ಗಳ ಮೂಲಕ ಕರೋನಾ ವೈರಸ್‌ ಸೋಂಕಿನ ಕುರಿತು ಪ್ರಯಾಣಿಕರ ಮಾಹಿತಿಗೆ ಪ್ರಚಾರ ನೀಡಲಾಗುತ್ತಿದೆ. ಈ ಸೋಂಕಿನ ಬಗ್ಗೆ ನಿಗಮದ ಸಿಬ್ಬಂದಿ ವಹಿಸಬೇಕಾದ ಎಚ್ಚರದ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.