ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಮಾ. 31ರವರೆಗೂ ಬಾರ್, ಪಬ್‌ಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ಹೊಟೇಲ್‌ಗಳು ಪಾರ್ಸೆಲ್ ಸೇವೆಯನ್ನು ಮಾತ್ರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಕೋವಿಡ್ 19 ಸೋಂಕು ಕುರಿತು ಶುಕ್ರವಾರ ವಿಧಾನ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ನಿಯಂತ್ರಣ ಕುರಿತು ಅಧಿಕಾರಿ ಗಳ ಜತೆ ಚರ್ಚೆ ಮಾಡಿ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆ ಪೈಕಿ ಮಾ.31ರ ವರೆಗೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಾರ್, ಪಬ್‌ಗಳನ್ನುಬಂದ್ ಮಾಡಬೇಕು. ಹೊಟೇಲ್‌ಗಳಲ್ಲಿ ಗುಂಪಾಗಿ ಕುಳಿತು ಆಹಾರ ಸೇವಿಸುವುದ ರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಎಲ್ಲ ಹೊಟೇಲ್‌ಗಳು ಅಡುಗೆ ಮನೆ ತೆರೆದು ಊಟ ತಯಾರಿಸಿ ಪಾರ್ಸೆಲ್ ಸೇವೆ ಮಾತ್ರ ನೀಡಬಹುದು ಎಂದು ತಿಳಿಸಿದರು.
ಪ್ರಧಾನಿ ಜತೆ ಚರ್ಚೆ
ಕೋವಿಡ್ 19 ನಿಯಂತ್ರಣ ಕುರಿತು ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಜತೆ ಉಪಯುಕ್ತ ಚರ್ಚೆ ನಡೆಸಿದ್ದೇವೆ. ಈ ವೇಳೆ ಪ್ರಧಾನಿಯವರಿಗೆ ರಾಜ್ಯದಲ್ಲಿ ಸದ್ಯ ಇರುವ ಸ್ಥಿತಿಗತಿ ಮಾಹಿತಿ ನೀಡಿದ್ದೇವೆ. ಎಲ್ಲ ರಾಜ್ಯಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ತಿಳಿಸಿದ್ದಾರೆ. ಜತೆಗೆ ಶಂಕಿತರ ಮತ್ತು ಸೋಂಕು ಪೀಡಿತರ ನಿಗಾ ವ್ಯವಸ್ಥೆ ಸೂಕ್ತ ಜಾರಿಗೆ ಹಾಗೂ ಸಾರ್ವಜನಿಕರಿಗೆ ಆಹಾರ ಧಾನ್ಯ, ವೈದ್ಯಕೀಯ ಸಲಕರಣೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದಾರೆ. ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಕೋವಿಡ್ 19 ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೊಸದಾಗಿ 500 ವೆಂಟಿ ಲೇಟರ್ ಖರೀದಿಗೆ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆಯುಳ್ಳ 5,000 ಹಾಸಿಗೆ ಸಿದ್ಧತೆಗೆ ಕ್ರಮ ಕೈಗೊಂಡಿದ್ದೇವೆ. ಇನ್ನು ರವಿವಾರ ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ರಾಜ್ಯದ ಜನರು ಸಹಕಾರ ನೀಡುವ ವಿಶ್ವಾಸವಿದೆ ಎಂದರು.
ಎಸೆಸೆಲ್ಸಿ ಪರೀಕ್ಷೆ ರದ್ದು ಇಲ್ಲ
ಎಸೆಸೆಲ್ಸಿ ಪರೀಕ್ಷೆ ಕುರಿತು ಗೊಂದಲಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಿಗದಿ ಪಡಿಸಿದ ದಿನಾಂಕದಂದು ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಶಾಲಾ ಶಿಕ್ಷಕರಿಗೆ ರಜೆ ಕುರಿತು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕ ದರ ವಸೂಲಿ ಬೇಡ
ಸಾಕಷ್ಟು ಮಂದಿ ಊಟ ತಿಂಡಿಗೆ ಹೊಟೇಲ್‌ಗಳನ್ನು ಅವಲಂಬಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಟೇಲ್ ಮಾಲಕರು ಅಡುಗೆ ಮನೆ ತೆರೆದು ಆಹಾರ ಸಿದ್ಧಪಡಿಸಿ ಪಾರ್ಸೆಲ್ ಸೇವೆಯನ್ನು ನೀಡಿ ಸಹಕರಿಸಬೇಕು. ಇನ್ನು ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಹೆಚ್ಚು ದರ ವಸೂಲಿ ಮಾಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
Comments are closed.