ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಿಗಳ ತುರ್ತು ಸಭೆ ಕರೆದು ಮಹತ್ವ ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಭಾನುವಾರ ಸಚಿವರು, ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಜೊತೆಗೆ, ಜನರ ಆರೋಗ್ಯ ರಕ್ಷಣೆಗೆ, ಈ ಬಿಕ್ಕಟ್ಟಿನ ಅವಧಿಯಲ್ಲಿ ಇತರ ಸಮಸ್ಯೆಗಳು ಉಂಟಾಗದಂತೆ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಘೋಷಿಸಿದ್ದಾರೆ. ಖ್ಯಾತ ವೈದ್ಯ ಡಾ.. ದೇವಿ ಶೆಟ್ಟಿ ಹಾಗೂ ಟಾಸ್ಕ್ ಫೋರ್ಸ್, ಸಚಿವರೊಂದಿಗೆ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸಹ ಭಾಗವಹಿಸಿದ್ದರು.
ಸಭೆಯಲ್ಲಿ ರಾಜ್ಯದಲ್ಲಿ ಕೊರೋನಾ ವೈರಸ್ ನಿರ್ಬಂಧಿಸುವ ಕುರಿತು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಮುಂದಿನ ಆದೇಶದವರೆಗೆ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಮತ್ತು ಇತರ ಎಲ್ಲ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ಗಡಿ ಭಾಗಗಳನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದ್ದು, ರಾಜ್ಯದಿಂದ ಹೊರಹೋಗುವ ಮತ್ತು ಒಳಬರುವ ಎಲ್ಲ ವಾಹನಗಳನ್ನು ಮತ್ತು ಚಾಲಕರನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಇನ್ನು 1700 ಹಾಸಿಗೆಯ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಐಸಿಎಂಆರ್ ಮತ್ತು ಎನ್ಐವಿ ಸಹಕಾರದೊಂದಿಗೆ ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೂ ಕೋವಿಡ್ ತಪಾಸಣೆಗೆ ಪರವಾನಿಗೆ ಕೊಡಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಲ್ಯಾಬ್ ಟೆಸ್ಟ್‌ಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಖಾಸಗಿ ಲ್ಯಾಬ್ ಗಳಲ್ಲೂ ಕೊರೋನಾ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ.
ಸ್ಥಳೀಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಕಡ್ಡಾಯಗೊಳ್ಳಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ನಡೆಯಬೇಕಿರುವ ಎಲ್ಲಾ ಚುನಾವಣೆಗಳನ್ನೂ ಮುಂದೂಡಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಬಾಲಬ್ರೂಯಿ ಅತಿಥಿ ಗೃಹ ಕೊರೊನಾ ವಾರ್ ರೂಂ ಆಗಿ ಪರಿವರ್ತನೆ ಮಾಡಲಾಗುತ್ತದೆ. ಇಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ್ಯಗಳು ನಡೆಯಲಿವೆ.
ಮುಂದಿನ 15 ದಿನ ನಗರದಿಂದ ಯಾರು ಹಳ್ಳಿಗಳಿಗೆ ಹೋಗದಂತೆ ಮುಖ್ಯಮಂತ್ರಿಗಳ ಮನವಿ ಮಾಡಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಎರಡು ತಿಂಗಳ ಪಡಿತರ ಒದಗಿಸಲು ಸೂಚಿಸಲಾಗಿದೆ. ನೀರು, ಆಹಾರ, ಧವಸ-ಧಾನ್ಯ, ಹಾಲು, ತರಕಾರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಒಟ್ಟಾರೆ ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸರ್ಕಾರ ಇನ್ನಿಲ್ಲದಂತೆ ಶ್ರಮಿಸುತ್ತಿದೆ.
Comments are closed.