ಬೆಂಗಳೂರು: ಕೊವಿಡ್- 19 ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯ ಸರ್ಕಾರದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಶನಿವಾರ ಸ್ಕೈಪ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ನಡ್ಡಾ ಅವರು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಂದ ಕೊರೊನಾ ಚಿಕಿತ್ಸೆ ಮತ್ತು ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಗೋಪಾಲಯ್ಯ, ಭೈರತಿ ಬಸವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಶಾಸಕ ಅರವಿಂದ ಲಿಂಬಾವಳಿ, ಸತೀಶ ರೆಡ್ಡಿ ಹಾಜರಿದ್ದರು.
‘ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿಗೆ ಆನ್‌ಲೈನ್ ತರಬೇತಿ ನೀಡಲಾಗುತ್ತಿದೆ. ವೆಂಟಿಲೇಟರ್ ಹಾಗೂ ಐಸಿಯು ನಿವರ್ಹಣೆಗೆ ತಾಂತ್ರಿಕ ತರಬೇತಿ ನೀಡಲಾಗಿದೆ. ವೈದ್ಯರು ಸೇರಿ 27 ಸಾವಿರ ಆರೋಗ್ಯ ಸಿಬ್ಬಂದಿ ತುರ್ತು ಸೇವೆಗೆ ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ 1300 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಿದೆ,”ಎಂದು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ನಡ್ಡಾ ಅವರಿಗೆ ಅಶ್ವತ್ಥನಾರಾಯಣ ಅವರು ವಿವರಿಸಿದರು.
‘ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪ್ರಮುಖ ಪ್ರದೇಶಗಳನ್ನು ಸೋಂಕುರಹಿತವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಬ್ಲೀಚಿಂಗ್ ಪೌಡರ್ ಅನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಮಾಡಲಾಗುತ್ತಿದೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಲಿ ಕನ್ಸಲ್ಟೆನ್ಸಿ ಆರಂಭ, ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಂಡಿರುವ ಜತೆಗೆ ಸೋಂಕಿತರ ಪತ್ತೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ,”ಎಂದು ವಿವರಿಸಲಾಯಿತು.
ನಡ್ಡಾ ಭರವಸೆ:
ರಾಜ್ಯದಲ್ಲಿ ಕೋವಿಡ್ 19 ವೈರಸ್ ಟೆಸ್ಟ್ ಕಿಟ್, ಪರ್ಸನಲ್ ಪ್ರೊಟೆಕ್ಟೀವ್ ಎಕ್ವಿಪ್ಮೆಂಟ್, ಎನ್-95 ಮಾಸ್ಕ್, ಟೆಸ್ಟ್ ಕಿಟ್, ವೆಂಟಿಲೇಟರ್ ಮುಂತಾದ ವೈದ್ಯ ಉಪಕರಣಗಳ ಕೊರತೆ ಎದುರಾಗಿದ್ದು, ಅವುಗಳ ಪೂರೈಕೆಗೆ ನೆರವಾಗುವಂತೆ ಸರ್ಕಾರದ ಪರವಾಗಿ ಮಾಡಿಕೊಂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜೆಪಿ ನಡ್ಡಾ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.
ಕೋವಿಡ್ 19 ವೈರಸ್ ವಿರುದ್ಧ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಡ್ಡಾ, ಕಾರ್ಮಿಕರು, ‘ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ವಲಸೆ ಹೋಗದಂತೆ ತಡೆಯಬೇಕು. ಇರುವಲ್ಲೇ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಿ,” ಎಂದು ಸೂಚಿಸಿದರು.
‘ಕೊವಿಡ್ 19 ಚಿಕಿತ್ಸೆ, ನಿಯಂತ್ರಣ ಹಾಗೂ ಇತರ ಸೌಲಭ್ಯ ಕಲ್ಪಿಸಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಅದಕ್ಕೆ ಪರಸ್ಪರ ಉತ್ತಮ ಸಂವಹನ ಇರಬೇಕು. ಜತೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಜತೆ ಸಂಪರ್ಕದಲ್ಲಿದ್ದು ಅಗತ್ಯ ಸಲಹೆ, ನೆರವು ಪಡೆದುಕೊಳ್ಳಿ’ ಎಂದು ಜೆ.ಪಿ. ನಡ್ಡಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
Comments are closed.