ಬೆಂಗಳೂರು (ಏ 1): ಇಡೀ ಜಗತ್ತಿನಲ್ಲಿ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಬಹುತೇಕ ಎಲ್ಲ ದೇಶಗಳಿಗೂ ಪ್ರವೇಶಿಸಿದೆ. ಚೀನಾದ ವುಹಾನ್ನಿಂದ ಆರಂಭವಾದ ಕೊರೋನಾ ಅಟ್ಟಹಾಸ ಇದೀಗ ವಿಶ್ವವನ್ನೇ ಆವರಿಸಿದೆ. ಇಟಲಿ, ಸ್ಪೇನ್, ಜರ್ಮನಿ, ಅಮೆರಿಕ, ಇರಾನ್ ದೇಶಗಳಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಈ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಸದ್ಯಕ್ಕೆ ಭಾರತ ಸೋಂಕಿತ ದೇಶಗಳ ಪೈಕಿ 40ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ಸಂಪೂರ್ಣವಾಗಿ ಕೊರೋನಾ ಸೋಂಕಿನ ಪ್ರಮಾಣ ಹತೋಟಿಗೆ ಬರಬಹುದು ಎಂಬ ನಿರೀಕ್ಷೆಯಿದೆ.
ವಿಶ್ವಾದ್ಯಂತ ಕೊರೋನಾ ವೈರಸ್ಗೆ 42,151 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ 8,58,669 ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಅವರಲ್ಲಿ 1,78,099 ಜನರು ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದಾರೆ. ಸದ್ಯಕ್ಕೆ ಜಗತ್ತಿನಲ್ಲಿ 6,38,419 ಜನ ಕೊರೋನಾ ವೈರಸ್ನಿಂದ ಬಳಲುತ್ತಿದ್ದಾರೆ. ಅವರಲ್ಲಿ 32,898 ಜನರು ಈ ಸೋಂಕಿನಿಂದ ಗುಣಮುಖರಾಗದ ಪರಿಸ್ಥಿತಿಯಲ್ಲಿದ್ದಾರೆ.
ಟಾಪ್ 10 ದೇಶಗಳು:
ವಿಶ್ವಾದ್ಯಂತ ಸದ್ಯಕ್ಕೆ 6,38,419 ಜನರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈಗಾಗಲೇ 1,78,099 ಜನ ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೆರಿಕದ ಪಾಲು ಹೆಚ್ಚಾಗಿದೆ. ಅಮೆರಿಕ-1,88,530, ಇಟಲಿ- 1,05,792, ಸ್ಪೇನ್- 95,923, ಚೀನಾ-81,518, ಜರ್ಮನಿ- 71,808, ಫ್ರಾನ್ಸ್- 52,128, ಇರಾನ್- 44,605, ಇಂಗ್ಲೆಂಡ್- 25,150, ಸ್ವಿಜರ್ಲೆಂಡ್- 16,605, ಟರ್ಕಿ- 13,531 ಟಾಪ್ 10 ದೇಶಗಳಾಗಿವೆ.
ಭಾರತದಲ್ಲಿ 1,397ಕೊರೋನಾ ಸೋಂಕಿತ ಪ್ರಕರಣಗಳಿವೆ. ಅವರಲ್ಲಿ 123 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಮೂಲಕ ಭಾರತ ಕೊರೋನಾ ಸೋಂಕಿತ ದೇಶಗಳ ಪೈಕಿ 40ನೇ ಸ್ಥಾನದಲ್ಲಿದೆ. ಭಾರತದಲ್ಲಿ ಲಾಕ್ಡೌನ್ನಿಂದಾಗಿ ಕೊರೋನಾ ಸೋಂಕಿತರ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 10 ಜನ ಕೊರೋನಾದಿಂದ ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಭೀತಿ ಶುರುವಾಗಿದೆ. 4 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಿಂದ ದೇಶಾದ್ಯಂತ ಕೊರೋನಾ ಹರಡುವ ಆತಂಕ ಎದುರಾಗಿದೆ.
Comments are closed.